ನಿರ್ಭಯಾ ಪ್ರಕರಣ: ಇಬ್ಬರ ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಶರ್ಮಾ ಮತ್ತು ಮುಕೇಶ್ ಕುಮಾರ್ ಅವರ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾ ಮಾಡುವ ಮೂಲಕ ಅವರ ಕುತ್ತಿಗೆಯ ಕುಣಿಗೆ ಬಿಗಿಯಾದಂತಾಗಿದೆ.
ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇದ್ದ ಏಕೈಕ ಕಾನೂನು ಮಾರ್ಗ ಕೂಡಾ ಇದರಿಂದ ಮುಚ್ಚಿದಂತಾಗಿದೆ. ಈ ತಿಂಗಳ 22ರಂದು ಗಲ್ಲು ಶಿಕ್ಷೆ ಜಾರಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ವಿ.ಎನ್.ರಮಣ, ಅರುಣ್ ಮಿಶ್ರಾ, ಆರ್.ಎಫ್.ನಾರಿಮನ್, ಆರ್.ಬಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ, ವಕೀಲರ ಅನುಪಸ್ಥಿತಿಯಲ್ಲಿ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತು.
"ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂಬ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಅಂತೆಯೇ ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಮನವಿಯನ್ನೂ ತಿರಸ್ಕರಿಸಲಾಗಿದೆ" ಎಂದು ನ್ಯಾಯಪೀಠ ಹೇಳಿದೆ.
ಕ್ಯುರೇಟಿವ್ ಅರ್ಜಿ ಮತ್ತು ಪ್ರಸ್ತುತಪಡಿಸಿದ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಂತೆ, ರೂಪಾ ಅಶೋಕ್ ಹುರ್ರಾ ಮತ್ತು ಅಶೋಕ್ ಹುರ್ರಾ ಪ್ರಕರಣದಲ್ಲಿ ನೀಡಿದ್ದ ತೀರ್ಪಿನ ಮಾನದಂಡಗಳ ಪರಿಮಿತಿಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಅರ್ಜಿ ತಿರಸ್ಕೃತಗೊಳ್ಳುವ ಮೂಲಕ ಇತರ ಆರೋಪಿಗಳಾದ ಪವನ್ ಗುಪ್ತಾ ಮತ್ತು ಅಕ್ಷಯ್ ಸಿಂಗ್ ಅವರ ಕಾನೂನು ಪ್ರಯತ್ನದ ಹಾದಿಯೂ ಮುಚ್ಚಿದಂತಾಗಿದೆ. ಇಬ್ಬರೂ ಇಂಥದ್ದೇ ಮನವಿ ಸಲ್ಲಿಸಲು ನಿರ್ಧರಿಸಿದ್ದರು.