​ಗಾಲಿ ಕುರ್ಚಿ ಕೇಳಿದ್ದಕ್ಕೆ ಧಮಕಿ ಹಾಕಿದ ಪೈಲಟ್ !

Update: 2020-01-15 04:07 GMT
ಫೈಲ್ ಫೋಟೊ 

ಹೊಸದಿಲ್ಲಿ : 75 ವರ್ಷದ ವೃದ್ಧೆಗೆ ​ಗಾಲಿ ಕುರ್ಚಿ ಕೇಳಿದ್ದಕ್ಕಾಗಿ ಇಂಡಿಗೋ ಪೈಲಟ್ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ.

ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನಯಾನ ಸಂಸ್ಥೆ ಪೈಲಟ್‌ನನ್ನು ಕರ್ತವ್ಯ ದಿಂದ ಮುಕ್ತಿಗೊಳಿಸಿದೆ ಎಂದು ಕೇಂದ್ರ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಸುಪ್ರಿಯಾ ಉನ್ನಿ ನಯ್ಯರ್ ಎಂಬ ಮಹಿಳೆ ತಮ್ಮ 75 ವರ್ಷದ ತಾಯಿಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ವಿಮಾನ ಇಳಿದ ಬಳಿಕ ​ಗಾಲಿ ಕುರ್ಚಿಗಾಗಿ ಮನವಿ ಮಾಡಿದ್ದರು. ಈ ವೇಳೆ ಪೈಲಟ್ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಕಿದ ಎಂದು ಸರಣಿ ಟ್ವೀಟ್‌ನಲ್ಲಿ ವಿವರಿಸಿದ್ದಾರೆ. ಸಚಿವರು ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ಆಂತರಿಕ ಪರಿಶೀಲನೆ ನಡೆಯುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಂಡಿಗೊ ಸಂಸ್ಥೆ ಸ್ಪಷ್ಟಪಡಿಸಿದೆ.

ಚೆನ್ನೈ- ಬೆಂಗಳೂರು ವಿಮಾನದಲ್ಲಿ ಸೋಮವಾರ ರಾತ್ರಿ 9.30ರ ವೇಳೆಗೆ ಇಳಿದಾಗ ಈ ಘಟನೆ ಸಂಭವಿಸಿದೆ. ವಿಮಾನಕ್ಕೆ ಕಾಯ್ದಿರಿಸುವ ವೇಳೆಯೇ ​ಗಾಲಿ ಕುರ್ಚಿಗೆ ಮನವಿ ಮಾಡಿದ್ದರು. ವಿಮಾನ ಇಳಿದಾಗ ​ಗಾಲಿ ಕುರ್ಚಿ ಕೇಳಿದಾಗ ಪೈಲಟ್ ನಿರಾಕರಿಸಿದ ಎನ್ನಲಾಗಿದೆ. ಅಸಭ್ಯವಾಗಿ ವರ್ತಿಸಿದ ಪೈಲಟ್ ನನ್ನು ಜಯಕೃಷ್ಣ ಎಂದು ಅವರು ಆಪಾದಿಸಿದ್ದಾರೆ. ಬಳಿಕ ​ಗಾಲಿ ಕುರ್ಚಿ ಬಂದರೂ ಜಯಕೃಷ್ಣ ಅದನ್ನು ತಡೆದರು ಎಂದು ಪತ್ರಕರ್ತೆಯಾಗಿರುವ ನಾಯರ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News