ಬಿಎಸ್ಪಿ ಶಿಸ್ತಿನ ಪಕ್ಷ, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಕ್ಷಕ್ಕೆ ನಂಬಿಕೆ ಇಲ್ಲ: ಮಾಯಾವತಿ

Update: 2020-01-15 07:31 GMT

ಲಕ್ನೋ, ಜ.15: ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಶಿಸ್ತುಬದ್ಧ ಪಕ್ಷವಾಗಿದ್ದು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಕ್ಷಕ್ಕೆ ನಂಬಿಕೆ ಇಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ

ಲಕ್ನೋದಲ್ಲಿ ತನ್ನ 64 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಹಿಂಸಾತ್ಮಕ ಪ್ರತಿಭಟನೆಯನ್ನು ಆಯೋಜಿಸುವುದರಲ್ಲಿ ಬಿಎಸ್ಪಿಗೆ ನಂಬಿಕೆಯಿಲ್ಲ. ಶಿಸ್ತಿನ ಪಕ್ಷವಾಗಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಲು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅನುಸರಿಸುತ್ತದೆ ” ಎಂದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಎಎ ಕುರಿತು ಕರೆದ ವಿಪಕ್ಷಗಳ ಸಭೆಯಿಂದ ದೂರ ಸರಿದ ಬಳಿಕ ಅವರ ಹೇಳಿಕೆಗಳು ಹೊರಬಿದ್ದಿವೆ. ಕಾಂಗ್ರೆಸ್ ಕರೆದ ಸಭೆಯಲ್ಲಿ ತಮ್ಮ ಪಕ್ಷ ಸೇರಿದರೆ ಅದು ರಾಜಸ್ಥಾನದಲ್ಲಿ ಪಕ್ಷದ ಬೆಂಬಲಿಗರ ಮನೋಸ್ಥೈರ್ಯಕ್ಕೆ ಧಕ್ಕೆ ತರುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.

ಕೇಂದ್ರ ಸರಕಾರ ಎನ್‌ಆರ್‌ಸಿ-ಎನ್‌ಪಿಆರ್‌ನೊಂದಿಗೆ ಹಠಮಾರಿ ನಿಲುವಿನಿಂದ ಹಿಂದೆ ಸರಿದು, ದೇಶ ಎದುರಿಸುತ್ತಿರುವ ನಿರುದ್ಯೋಗ, ಹಣದುಬ್ಬರ ಸಮಸ್ಯೆಯ ಬಗ್ಗೆ ಗಮನಹರಿಸಲಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಕಾಂಗ್ರೆಸ್ ಪಕ್ಷದ ಹಾದಿಯನ್ನು ಅನುಸರಿಸುತ್ತಿದೆ. ಇದು ರಾಜಕೀಯ ಅಧಿಕಾರಕ್ಕಾಗಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸರ್ಕಾರದ ತಪ್ಪು ನೀತಿಗಳು ಗೊಂದಲಕ್ಕೆ ಕಾರಣವಾಗಿವೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದು ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ ಎಂದರು.

ದೇಶದಲ್ಲಿ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಜಾರಿಗೊಳಿಸಲು ಬಿಜೆಪಿಯ ಹಠಮಾರಿ ಧೋರಣೆಯನ್ನು ನಿಲ್ಲಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.

"ಕಾಂಗ್ರೆಸ್ ಕೂಡ ದೇಶದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಆಗ ಜನರು ಅವರಿಗೆ ದಾರಿ ತೋರಿಸಿದರು" ಎಂದು ಅವರು ಹೇಳಿದರು.

"ನಿರುದ್ಯೋಗ, ಹಣದುಬ್ಬರದ ದೊಡ್ಡ ಸಮಸ್ಯೆಯೊಂದಿಗೆ ರಾಷ್ಟ್ರವು ಹೆಣಗಾಡುತ್ತಿರುವಾಗ ದೇಶದಲ್ಲಿ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ತರುವಲ್ಲಿ ಬಿಜೆಪಿ ಮೊಂಡುತನವನ್ನು ನಿಲ್ಲಿಸಬೇಕು. ಮೋದಿ ಸರ್ಕಾರ ಬಂಡವಾಳಶಾಹಿಗಳ ಕೈಯಲ್ಲಿದೆ " ಎಂದು ಮಾಯಾವತಿ ಅಭಿಪ್ರಾಯಪಟ್ಟರು.

"ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಬಡವರ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. ಭಯದ ವಾತಾವರಣವನ್ನು ಸೃಷ್ಠಿಸಿದೆ ಮತ್ತು ನಿರುದ್ಯೋಗವನ್ನು ಹರಡುತ್ತಿದೆ" ಎಂದು ಮಾಯಾವತಿ  ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News