370ನೇ ವಿಧಿಯನ್ನು ರದ್ದುಪಡಿಸಿರುವುದು ಐತಿಹಾಸಿಕ ಹೆಜ್ಜೆ: ಸೇನಾ ಮುಖ್ಯಸ್ಥ ನರವಾಣೆ
ಹೊಸದಿಲ್ಲಿ, ಜ.15: ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿರುವುದು ಐತಿಹಾಸಿಕ ಹೆಜ್ಜೆಯಾಗಿದ್ದು, ಇದು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸೇರಿಸಿದಂತಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಬುಧವಾರ ಹೇಳಿದ್ದಾರೆ.
ಸೇನಾ ದಿನಾಚರಣೆಯ ಪೆರೇಡ್ ನಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ, "370 ನೇ ವಿಧಿಯನ್ನು ರದ್ದುಪಡಿಸುವುದು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸೇರಿಸುವುದು ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಇದರ ರದ್ದುಗೊಳಿಸುವಿಕೆಯು ನಮ್ಮ ಪಶ್ಚಿಮ ನೆರೆಯ ಪಾಕಿಸ್ತಾನದ ಪ್ರಾಕ್ಸಿ (ಬದಲಿ) ಯುದ್ಧಕ್ಕೆ ಅಡ್ಡಿಪಡಿಸಿದೆ" ಎಂದು ಹೇಳಿದರು.
ಸಂವಿಧಾನದ 370 ನೇ ವಿಧಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು.
ಸೇನೆಯು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಪುನರುಚ್ಚರಿಸಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ, "ಭಾರತೀಯ ಸೇನೆಯು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ ಮತ್ತು ಅಂತಹ ಚಟುವಟಿಕೆಗಳಿಗೆ ಸೂಕ್ತವಾದ ಉತ್ತರವನ್ನು ನೀಡಲು ನಮಗೆ ಹಲವಾರು ಆಯ್ಕೆಗಳಿವೆ" ಎಂದು ಹೇಳಿದರು.
"ಭವಿಷ್ಯದ ಯುದ್ಧಗಳಿಗೆ ಸೈನ್ಯವನ್ನು ತಯಾರಿಸಲು, ಸಂಪರ್ಕ ಮತ್ತು ಸಂಪರ್ಕೇತರ ಯುದ್ಧಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ" ಎಂದು ಸೇನಾ ಮುಖ್ಯಸ್ಥರು ಹೇಳಿದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಉಪಸ್ಥಿತರಿದ್ದರು.