ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಲೀಗ್

Update: 2020-01-16 13:50 GMT

ಹೊಸದಿಲ್ಲಿ: ಪೌರತ್ವ ಕಾಯ್ದೆ 2019 ಜಾರಿಗೆ ತಡೆ ಹೇರುವಂತೆ ಕೋರಿ ಗುರುವಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡು ಹೊಸ ಅಪೀಲುಗಳನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ದೇಶಾದ್ಯಂತ ಎನ್‍ಆರ್ ಸಿ ನಡೆಸಲಾಗುವುದೇ ಎಂಬ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರಕ್ಕೆ ಸೂಚಿಸುವಂತೆಯೂ ಲೀಗ್ ತನ್ನ ಅಪೀಲಿನಲ್ಲಿ ಕೋರಿದೆ.

ಎನ್‍ಆರ್ ಸಿಗೆ ಪೂರ್ವಭಾವಿಯಾಗಿ ಸಿಎಎ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ವಿವಿಧ ಸಂದರ್ಭಗಳಲ್ಲಿ ನೀಡಿರುವ ಹೇಳಿಕೆಗಳನ್ನೂ ಅಪೀಲುಗಳಲ್ಲಿ ಉಲ್ಲೇಖಿಸಲಾಗಿದೆ. ಎನ್‍ಪಿಆರ್ ಪ್ರಕ್ರಿಯೆ ಎನ್‍ಆರ್ ಸಿಯತ್ತ ಮೊದಲ ಹೆಜ್ಜೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಕ್ರೀಡಾ ಸಹಾಯಕ ಸಚಿವ ಕಿರಣ್ ರಿಜ್ಜು ಹೇಳಿರುವುದನ್ನೂ ಉಲ್ಲೇಖಿಸಲಾಗಿದೆ.

ಆದರೆ ಪ್ರಧಾನಿ, ಗೃಹ ಸಚಿವ ಹಾಗೂ ಕೇಂದ್ರ ಕಾನೂನು ಸಚಿವರು ನಂತರ ಹೇಳಿಕೆ ನೀಡಿ ಎನ್‍ ಪಿಆರ್ ಗೂ ಎನ್‍ಆರ್ ಸಿಗೂ ಸಂಬಂಧವಿಲ್ಲ ಎಂದು  ಹೇಳಿದ್ದರೂ ದೇಶಾದ್ಯಂತ ಸಿಎಎ ಹಾಗೂ ಎನ್‍ ಆರ್ ಸಿ ವಿರುದ್ಧ  ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳನ್ನು ನೀಡಲಾಗಿತ್ತು ಎಂದು ಅಪೀಲಿನಲ್ಲಿ ಹೇಳಲಾಗಿದೆ.

ಕೇಂದ್ರ ಸಚಿವರಿಂದ ಇಂತಹ ವೈರುದ್ಧ್ಯದ ಹೇಳಿಕೆಗಳು ಜನರಲ್ಲಿ ಗೊಂದಲವೇರ್ಪಡಿಸುತ್ತಿವೆಯಾದುದರಿಂದ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂದು ಲೀಗ್ ಕೋರಿದೆ.

ಸಿಎಎ ಅಸಾಂವಿಧಾನಿಕವೆಂದು ಆರೋಪಿಸಿ  ಐಯುಎಂಎಲ್ ಸುಪ್ರೀಂ ಕೋರ್ಟಿನಲ್ಲಿ ಈ ಹಿಂದೆ ಕೂಡ ಅಪೀಲು ಸಲ್ಲಿಸಿದೆ.
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News