ಆಸ್ಟ್ರೇಲಿಯದ ಕಾಡ್ಗಿಚ್ಚು ಆವೃತ ಪ್ರದೇಶಗಳಲ್ಲಿ ಭಾರೀ ಮಳೆ

Update: 2020-01-16 14:51 GMT

ನೌರಾ (ಆಸ್ಟ್ರೇಲಿಯ), ಜ. 16: ಆಸ್ಟ್ರೇಲಿಯದ ಕಾಡ್ಗಿಚ್ಚು ಆವೃತ ಪೂರ್ವ ಭಾಗದಲ್ಲಿ ಗುರುವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ ಹಾಗೂ ಮುಂದಿನ ದಿನಗಳಲ್ಲೂ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರೊಂದಿಗೆ ತಿಂಗಳುಗಳಿಂದ ಉರಿಯುತ್ತಿರುವ ಕಾಡ್ಗಿಚ್ಚಿಗೆ ಕೊಂಚ ವಿರಾಮ ಲಭಿಸಿದೆ.

ಹವಾಮಾನ ಬದಲಾವಣೆಯ ಪರಿಣಾಮವಾಗಿ ಹುಟ್ಟಿಕೊಂಡಿದೆ ಎಂದು ಭಾವಿಸಲಾಗಿರುವ ಕಾಡ್ಗಿಚ್ಚು ಇಷ್ಟೊಂದು ದೀರ್ಘಾವಧಿಯಲ್ಲಿ ಮತ್ತು ಇಷ್ಟೊಂದು ತೀವ್ರತೆಯಲ್ಲಿ ಈ ಹಿಂದೆಂದೂ ಆಸ್ಟ್ರೇಲಿಯವನ್ನು ಕಾಡಿರಲಿಲ್ಲ.

ಕಾಡ್ಗಿಚ್ಚಿನಿಂದಾಗಿ 28 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 100 ಕೋಟಿ ಪ್ರಾಣಿಗಳು ದಹಿಸಿ ಹೋಗಿವೆ.

ನಿರಂತರ ಬಿಸಿ ಹವಾಮಾನ ಮತ್ತು ಅಪರೂಪವೆಂಬಂತೆ ಸುರಿಯುತ್ತಿದ್ದ ಹಗುರ ಮಳೆಯು ಬಿಕ್ಕಟ್ಟನ್ನು ತೀವ್ರಗೊಳಿಸಿತ್ತು.

 ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚಿನ ಆಕ್ರಮಣಕ್ಕೆ ಸಿಲುಕಿದ್ದ ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿ ಗುರುವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಡಝನ್‌ಗಟ್ಟಳೆ ಬೆಂಕಿಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಭಾವಿಸಲಾಗಿದೆ.

‘‘ಈ ಮಳೆಯು ಎಲ್ಲ ಬೆಂಕಿಯನ್ನು ನಂದಿಸದಿದ್ದರೂ, ನಿಯಂತ್ರಣ ಮಾಡಲು ಈ ಮಳೆಯು ತುಂಬಾ ನೆರವಾಗಲಿದೆ’’ ಎಂದು ನ್ಯೂಸೌತ್‌ವೇಲ್ಸ್ ರಾಜ್ಯದ ಅಗ್ನಿಶಾಮಕ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News