ಸಿಎಎ, ಎನ್‌ಆರ್‌ಸಿ ಉದ್ಯೋಗ ಸೃಷ್ಟಿಸದು: ಶಿವಸೇನೆ

Update: 2020-01-16 15:30 GMT
ಫೋಟೊ ಕೃಪೆ: twitter.com/ShivSena

ಹೊಸದಿಲ್ಲಿ, ಜ. 16: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದೇಶದಲ್ಲಿ ಉದ್ಯೋಗ ಸೃಷ್ಟಿಸದು. ಕೆಲಸ ನಿರ್ವಹಿಸುತ್ತಿರುವವರಿಗೆ ತಮ್ಮ ಕೆಲಸ ಮುಂದೆ ಇರುತ್ತದೆಯೇ ಎಂಬ ಖಾತರಿ ಇಲ್ಲ. ಆದರೂ ಹೊಸ ಉದ್ಯೋಗ ಸೃಷ್ಟಿಸುವ ಚಿಂತನೆ ಕೇಂದ್ರ ಸರಕಾರಕ್ಕೆ ಇಲ್ಲ’’ ಎಂದು ಶಿವಸೇನೆ ಹೇಳಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಕಾನೂನನ್ನು ಜಾರಿಗೆ ತರುವಲ್ಲಿ ನಿರತವಾಗಿದೆ. ಆದರೆ, ಅದು ತರಕಾರಿಗಳು, ಇತರ ವಸ್ತುಗಳ ಬೆಲೆ ಏರಿಕೆ, ಉದ್ಯೋಗ ಕುಸಿತದಂತಹ ವಿಷಯಗಳ ಕುರಿತು ವೌನವಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ ಸಂಪಾದಕೀಯದಲ್ಲಿ ಗುರುವಾರ ಹೇಳಿದೆ.

ಅಗತ್ಯದ ವಸ್ತುಗಳ ಬೆಲೆ ಹೆಚ್ಚಳದ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಹಣದುಬ್ಬರ ನಿಯಂತ್ರಿಸದೇ ಇದ್ದರೆ, ಜನರು ಎನ್‌ಡಿಎ ಸರಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದಿದೆ. ‘‘ದೇಶದ ಸಾಮಾನ್ಯ ಜನರು ಹಣದುಬ್ಬರದ ಬೇಗೆಯಲ್ಲಿ ನರಳುತ್ತಿದ್ದಾರೆ. ಹಣದುಬ್ಬರ ಹೆಚ್ಚುತ್ತಿರುವುದನ್ನು ಕೇಂದ್ರ ಸರಕಾರ ನಿಯಂತ್ರಿಸದೇ ಇದ್ದರೆ, ಜನರು ಕೇಂದ್ರ ಸರಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂಬ ಎಚ್ಚರ ಇರಲಿ’’ ಎಂದು ಅವರು ತಿಳಿಸಿದ್ದಾರೆ.

ದೇಶದ ಬೆಳವಣಿಗೆ ದರ ನಿರಂತರ ಕುಂಠಿತವಾಗಲು ಕೇಂದ್ರ ಸರಕಾರದ ನೀತಿಗಳು ಕಾರಣ ಎಂದು ಶಿವಸೇನೆ ಪ್ರತಿಪಾದಿಸಿದೆ. ‘‘ಪಶ್ಚಿಮ ಏಶ್ಯಾದ ಬಿಕ್ಕಟ್ಟು, ಅಮೆರಿಕ ಹಾಗೂ ಚೀನಾ ನಡುವಿನ ಹೆಚ್ಚುತ್ತಿರುವ ವಾಣಿಜ್ಯ ಸಮರದ ಭೀತಿ ಸಮಕಾಲೀನ ಬಿಕ್ಕಟ್ಟು. ಆದರೆ, ಲೋಕಸಭಾ ಚುನಾವಣೆಯಲ್ಲಿ ನಿರಂತರ ಎರಡನೇ ಬಾರಿ ಕೂಡ ಜಯ ಗಳಿಸಿದ ಹೊರತಾಗಿಯೂ ತೆವಳುತ್ತಿರುವ ಆರ್ಥಿಕತೆ ಹಾಗೂ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಾರಣವಾದ ಕೇಂದ್ರ ಸರಕಾರದ ಪ್ರಸ್ತುತ ನೀತಿಗಳ ಬಗ್ಗೆ ಏನು ಹೇಳುತ್ತೀರಿ?’’ ಎಂದು ಅದು ಪ್ರಶ್ನಿಸಿದೆ.

ಹಣದುಬ್ಬರ ಗಗನಕ್ಕೇರುತ್ತಿರುವುದರಿಂದ ಸಾಮಾನ್ಯ ಜನರಿಗೆ ಬದುಕಲು ಕಷ್ಟಕರವಾಗುತ್ತಿದೆ ಎಂದು ಪ್ರಚಾರ ಮಾಡುವ ಮೂಲಕ 2014 ಹಾಗೂ ಅದರ ನಂತರ ನಡೆದ ಚುನಾವಣೆಯಲ್ಲಿ ಜಯ ಗಳಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಈಗ ಈ ಸ್ಥಿತಿ ಏನೂ ಬದಲಾವಣೆ ಆಗಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News