ರಶ್ಯ: ತೆರಿಗೆ ಮುಖ್ಯಸ್ಥರನ್ನು ನೂತನ ಪ್ರಧಾನಿಯಾಗಿ ನೇಮಿಸಿದ ಪುಟಿನ್

Update: 2020-01-16 16:29 GMT
file photo

ಮಾಸ್ಕೊ (ರಶ್ಯ), ಜ. 16: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ದಿಢೀರನೆ ತೆರಿಗೆ ಇಲಾಖೆಯ ಮುಖ್ಯಸ್ಥ ಮಿಖೈಲ್ ಮಿಶುಸ್ಟಿನ್‌ರನ್ನು ಪ್ರಧಾನಿಯಾಗಿ ನೇಮಿಸಿದ್ದಾರೆ.

ರಶ್ಯದ ರಾಜಕೀಯ ವ್ಯವಸ್ಥೆಗೆ ಹೊಸ ರೂಪ ನೀಡಲು ಸುಧಾರಣೆಗಳಿಗೆ ಪುಟಿನ್ ಕರೆ ನೀಡಿದ ಬೆನ್ನಲ್ಲೇ, ರಶ್ಯ ಸಚಿವ ಸಂಪುಟ ಬುಧವಾರ ರಾಜೀನಾಮೆ ನೀಡಿದೆ. ಭಾರೀ ಪ್ರಮಾಣದಲ್ಲಿ ಸಂವಿಧಾನ ತಿದ್ದುಪಡಿಗಾಗಿ ಸಚಿವ ಸಂಪುಟದ ರಾಜೀನಾಮೆಯನ್ನು ಪುಟಿನ್ ಪಡೆದುಕೊಂಡಿದ್ದಾರೆ. ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಅವರು ಸಂವಿಧಾನ ತಿದ್ದುಪಡಿಗೆ ಇಳಿದಿದ್ದಾರೆ ಎಂಬ ಊಹಾಪೋಹಗಳು ಹಬ್ಬಿವೆ.

ಪ್ರಧಾನಿ ಹುದ್ದೆಗೆ ಮಾಡಲಾಗಿರುವ ನೇಮಕದ ಬಗ್ಗೆ ಸಂಸದರು ಗುರುವಾರ ಸಮಾಲೋಚನೆ ಆರಂಭಿಸಲಿದ್ದಾರೆ. ಪುಟಿನ್‌ಗೆ ನಿಷ್ಠವಾಗಿರುವ ಕೆಳಮನೆ ಡ್ಯೂಮವು ನೂತನ ಪ್ರಧಾನಿ ನೇಮಕಾತಿಯನ್ನು ಅನುಮೋದಿಸುವುದು ನಿಶ್ಚಿತವಾಗಿದೆ.

ಪುಟಿನ್‌ರ ಪ್ರಸಕ್ತ ಅಧ್ಯಕ್ಷೀಯ ಅವಧಿ 2024ರಲ್ಲಿ ಮುಕ್ತಾಯವಾಗಲಿದೆ. ಅದರ ಬಳಿಕವೂ ಅಧಿಕಾರದಲ್ಲಿ ಮುಂದುವರಿಯಲು ಹೊಸ ಹುದ್ದೆಯೊಂದನ್ನು ಸೃಷ್ಟಿಸುವುದಕ್ಕಾಗಿ ಅಥವಾ ಪ್ರಭಾವಿ ತೆರೆಮರೆಯ ಪಾತ್ರವೊಂದರಲ್ಲಿ ಮುಂದುವರಿಯುವುದಕ್ಕಾಗಿ ಅವರು ಸಂವಿಧಾನ ತಿದ್ದುಪಡಿಗೆ ಮುಂದಾಗಿದ್ದಾರೆ ಎಂದು ವ್ಯಾಪಕವಾಗಿ ಭಾವಿಸಲಾಗಿದೆ.

67 ವರ್ಷದ ಪುಟಿನ್ 1999ರಿಂದ ರಶ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಇದು ಅವರ ನಾಲ್ಕನೇ ಅಧ್ಯಕ್ಷೀಯ ಅವಧಿಯಾಗಿದ್ದು, ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News