×
Ad

ಕೇಸರಿ ನಿಲುವಂಗಿ ಧರಿಸಿದ ತಿರುವಳ್ಳುವರ್ ಚಿತ್ರ ಬದಲಿಸಿದ ಉಪ ರಾಷ್ಟ್ರಪತಿ ನಾಯ್ಡು

Update: 2020-01-16 22:13 IST

ಹೊಸದಿಲ್ಲಿ, ಜ. 16: ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೇಸರಿ ನಿಲುವಂಗಿ ಧರಿಸಿದ ತಮಿಳು ಕವಿ ತಿರುವಳ್ಳುವರ್ ಚಿತ್ರದ ಕುರಿತು ಡಿಎಂಕೆ ಕೋಲಾಹಲ ಎಬ್ಬಿಸಿದ ಬಳಿಕ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅದನ್ನು ಅಳಿಸಿದ್ದಾರೆ.

ಅದರ ಬದಲಿಗೆ ಬಿಳಿ ನಿಲುವಂಗಿ ಧರಿಸಿದ ತಿರುವಳ್ಳುವರ್ ಅವರ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕವಿ ತಿರುವಳ್ಳುವರ್ ಅವರನ್ನು ಕೇಸರೀಕರಣಗೊಳಿಸಬಾರದು ಎಂದು ಡಿಎಂಕೆ ಮರು ಉಚ್ಚರಿಸಿದೆ. ವಿವಾದಾತ್ಮಕ ಕೇಸರಿ ನಿಲುವಂಗಿ ಧರಿಸಿದ, ಹಣೆಗೆ ತಿಲಕ ಇರಿಸಿದ ತಿರುವಳ್ಳುವರ್ ಚಿತ್ರದ ಬದಲಿಗೆ ಬಿಳಿ ನಿಲುವಂಗಿ ಧರಿಸಿದ ತಿರುವಳ್ಳುವರ್ ಅವರ ಇನ್ನೊಂದು ಚಿತ್ರವನ್ನು ಟ್ವಿಟರ್ ಹ್ಯಾಂಡಲ್‌ ನಲ್ಲಿ ಪೋಸ್ಟ್ ಮಾಡಿದ ವೆಂಕಯ್ಯ ನಾಯ್ಡು, “ತಮಿಳು ಕವಿ, ತತ್ವಜ್ಞಾನಿ, ಸಂತ ತಿರುವಳ್ಳುವರ್ ಅವರ ಜನ್ಮ ದಿನವಾದ ಇಂದು ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಬರೆದ ‘ತಿರುಕ್ಕುರಳ್’ ಗೌರವಯುತವಾಗಿ ಹೇಗೆ ಬದುಕಬೇಕು ಎಂದು ನನಗೆ ಮಾರ್ಗದರ್ಶನ ನೀಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಕೇಸರಿ ನಿಲುವಂಗಿ ಧರಿಸಿ, ಹಣೆಗೆ ಕೆಂಪು ತಿಲಕ ಇರಿಸಿದ ತಿರುವಳ್ಳುವರ್ ಚಿತ್ರದ ಬಗ್ಗೆ ಡಿಎಂಕೆ ಸಂಸದ ಡಾ. ಸೆಂಥಿಲ್‌ಕುಮಾರ್ ಆಕ್ಷೇಪ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರುವಳ್ಳುವರ್ ಚಿತ್ರವನ್ನು ಬದಲಾಯಿಸಿದ್ದರು. ಅನಂತರ ನಾಯ್ಡು ಅವರಿಗೆ ಕೃತಜ್ಞತೆ ಸಲ್ಲಿಸಿದ ಸೆಂಥಿಲ್‌ಕುಮಾರ್, ‘‘ಈ ಟ್ವೀಟ್ ಅಳಿಸಿರುವುದಕ್ಕೆ ನಾನು ಉಪ ರಾಷ್ಟ್ರಪತಿ ಅವರಿಗೆ ಚಿರಋಣಿ. ಅವರಿಗೆ ವಿಷಯ ಅರ್ಥವಾಗಿದೆ. ತಿರುವಳ್ಳುವರ್ ಎಲ್ಲರಿಗೂ ಸೇರಿದವರು. ಅಧಿಕೃತ ಚಿತ್ರದಲ್ಲಿ ತಿರುವಳ್ಳುವರ್ ಬಿಳಿ ನಿಲುವಂಗಿ ಧರಿಸಿದ್ದಾರೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News