×
Ad

ಮೊದಲ ಪಂದ್ಯದಲ್ಲಿ ಜೊಕೊವಿಕ್-ಸ್ಟ್ರಫ್, ಬಾರ್ಟಿ-ಸುರೆಂಕೊ

Update: 2020-01-16 23:32 IST

ಮೆಲ್ಬೋರ್ನ್, ಜ.16: ಅಗ್ರ ಶ್ರೇಯಾಂಕಿತೆ ಹಾಗೂ ವಿಶ್ವದ ನಂ.1 ಆಟಗಾರ್ತಿ ಅಶ್ ಬಾರ್ಟಿ ಮುಂದಿನ ವಾರ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಉಕ್ರೇನ್‌ನ ಲೆಸಿಯಾ ಸುರೆಂಕೊರನ್ನು ಎದುರಿಸುವ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಆತಿಥೇಯ ಆಸ್ಟ್ರೇಲಿಯ ದೀರ್ಘಸಮಯದಿಂದ ಕಾಯುತ್ತಿದ್ದ ಪ್ರಶಸ್ತಿ ಬರ ನೀಗಿಸುವ ವಿಶ್ವಾಸದಲ್ಲಿದ್ದಾರೆ.

ಪುರುಷರ ಸಿಂಗಲ್ಸ್ ಚಾಂಪಿಯನ್ ನೊವಾಕ್ ಜೊಕೊವಿಕ್ ಮೊದಲ ಸುತ್ತಿನ ಪಂದ್ಯದಲ್ಲಿ ಜಾನ್-ಲೆನಾರ್ಡ್ ಸ್ಟ್ರಫ್‌ರನ್ನು ಎದುರಿಸುವ ಮೂಲಕ 8ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸುವ ನಿಟ್ಟಿಯಲ್ಲಿ ತನ್ನ ಹೋರಾಟ ಆರಂಭಿಸಲಿದ್ದಾರೆ. ಸೆಮಿ ಫೈನಲ್‌ನಲ್ಲಿ ರೋಜರ್ ಫೆಡರರ್ ಸವಾಲು ಎದುರಿಸುವ ಸಾಧ್ಯತೆಯಿದೆ. ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಜೊಕೊವಿಕ್‌ಗೆ ಸೋತಿದ್ದ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಬೊಲಿವಿಯದ ಹ್ಯುಗೊ ಡೆಲ್ಲಿಯೆನ್‌ರನ್ನು ಎದುರಿಸಲಿದ್ದಾರೆ. ಸೆಮಿ ಫೈನಲ್‌ನಲ್ಲಿ ಸ್ಥಳೀಯ ಫೇವರಿಟ್ ನಿಕ್ ಕಿರ್ಗಿಯೊಸ್ ಎದುರಾಳಿಯಾಗುವ ನಿರೀಕ್ಷೆಯಿದೆ. 21 ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಆಸ್ಟ್ರೇಲಿಯದಲ್ಲಿ ಏಳನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದು, ಅಮೆರಿಕದ ಸ್ಟೀವ್ ಜಾನ್ಸನ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಫೆಡರರ್‌ಗೆ ಅಂತಿಮ 16ರ ಸುತ್ತಿನಲ್ಲಿ ಗ್ರಿಗೊರ್ ಡಿಮಿಟ್ರೊವ್ ಸವಾಲು ಎದುರಾಗುವ ಸಾಧ್ಯತೆಯಿದೆ.

ಆಕ್ಲೆಂಡ್‌ನಲ್ಲಿ ಪ್ರಶಸ್ತಿ ಜಯಿಸಿ ಆತ್ಮವಿಶ್ವಾಸದಿಂದ ಆಸ್ಟ್ರೇಲಿಯಕ್ಕೆ ಆಗಮಿಸಿರುವ ಸೆರೆನಾ ವಿಲಿಯಮ್ಸ್ ಅವರು ಮಾರ್ಗರೆಟ್ ಕೋರ್ಟ್ ಹೆಸರಲ್ಲಿರುವ 24 ಗ್ರಾನ್‌ಸ್ಲಾಮ್ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟುವತ್ತ ಚಿತ್ತವಿರಿಸಿದ್ದಾರೆ. 8ನೇ ಶ್ರೇಯಾಂಕಿತೆ ಸೆರೆನಾ ಮೊದಲ ಸುತ್ತಿನಲ್ಲಿ ರಶ್ಯದ ಅನಸ್ತೇಸಿಯ ಪೊಟಾಪೊವಾರನ್ನು ಎದುರಿಸಲಿದ್ದಾರೆ.

ಸೆರೆನಾರ ಸಹೋದರಿ, 39ರ ಹರೆಯದ ವೀನಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್‌ರನ್ನು ಮುಖಾಮುಖಿಯಾಗಲಿದ್ದಾರೆ. 15ರ ಹರೆಯದ ಗೌಫ್ ಕಳೆದ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಓರ್ವ ಕ್ವಾಲಿಫೈಯರ್ ಆಟಗಾರ್ತಿಯಾಗಿ ಪ್ರಧಾನ ಸುತ್ತಿನ ಹಾದಿಯಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೀನಸ್‌ರನ್ನು ಎರಡು ಬಾರಿ ಮಣಿಸಿ ಎಲ್ಲರ ಗಮನ ಸೆಳೆದಿದ್ದರು. ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ಎರಡನೇ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಜಪಾನ್‌ನ ನವೊಮಿ ಒಸಾಕಾ ಮೊದಲ ಸುತ್ತಿನಲ್ಲಿ ಝೆಕ್‌ನ ಮೇರಿ ಬೌಝಕೋವಾರನ್ನು ಎದುರಿಸುವರು.

ವೈಲ್ಡ್ ಕಾರ್ಡ್‌ನ ಮೂಲಕ ಟೂರ್ನಿಗೆ ಪ್ರವೇಶಿಸಿರುವ ಇನ್ನೋರ್ವ ಮಾಜಿ ಚಾಂಪಿಯನ್ ಮರಿಯಾ ಶರಪೋವಾಗೆ ಮೊದಲ ಸುತ್ತಿನಲ್ಲಿ 19ನೇ ಶ್ರೇಯಾಂಕದ ಡೊನ್ನಾ ವೆಕಿಕ್ ಎದುರಾಳಿಯಾಗಲಿದ್ದಾರೆ.

ಆಸ್ಟ್ರೀಯದ ಥೀಮ್, ಫ್ರಾನ್ಸ್‌ನ ಅಡ್ರಿಯನ್ ಮನ್ನರಿನೊರನ್ನು, ಗ್ರೀಕ್‌ನ ಸಿಟ್‌ಸಿಪಾಸ್ ಅವರು ಇಟಲಿಯ ಸಲ್ವಟೊರ್ ಕಾರುಸೊರನ್ನು ಎದುರಿಸಲಿದ್ದಾರೆ. ರಶ್ಯದ 4ನೇ ಶ್ರೇಯಾಂಕದ ಮೆಡ್ವಡೆವ್ ಮೊದಲ ಸುತ್ತಿನಲ್ಲಿ ಅಮೆರಿಕದ ಫ್ರಾನ್ಸಿಸ್ ಟಿಯಫೋಯ್ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News