×
Ad

ನಿರ್ಭಯಾ ಅತ್ಯಾಚಾರ,ಹತ್ಯೆ ಪ್ರಕರಣ: ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

Update: 2020-01-17 12:43 IST

ಹೊಸದಿಲ್ಲಿ, ಜ. 17: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ನಾಲ್ವರು ದೋಷಿಗಳಲ್ಲಿ ಓರ್ವನಾದ ಮುಖೇಶ್ ಸಿಂಗ್ ಸಲ್ಲಿಸಿದ ಕ್ಷಮಾದಾನದ ಮನವಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ತಿರಸ್ಕರಿಸಿದ್ದಾರೆ.

ಮುಖೇಶ್ ಸಿಂಗ್‌ನ ಕ್ಷಮಾದಾನ ಮನವಿ ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರಪತಿ ಭವನಕ್ಕೆ ಶಿಫಾರಸು ಮಾಡಿದ ಗಂಟೆಗಳ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ಷಮಾದಾನ ಮನವಿ ತಿರಸ್ಕರಿಸಿದ್ದಾರೆ.

ವಿನಯ ಶರ್ಮಾ ಹಾಗೂ ಇನ್ನೋರ್ವ ದೋಷಿಯ ಅಂತಿಮ ಕಾನೂನು ಪರಿಹಾರವಾದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ ಮರಣದಂಡನೆಗೆ ಮುನ್ನ ಅಂತಿಮವಾಗಿ ಮುಖೇಶ್ ಮಂಗಳವಾರ ಕ್ಷಮಾದಾನ ಮನವಿ ಸಲ್ಲಿಸಿದ್ದ.

ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ವಿನಯ್ ಶರ್ಮಾ, ಮುಖೇಶ್ ಸಿಂಗ್, ಅಕ್ಷಯ್ ಕುಮಾರ್ ಸಿಂಗ್ ಹಾಗೂ ಪವನ್ ಗುಪ್ತಾನನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ನೇಣಿಗೆ ಹಾಕುವಂತೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಕಳೆದ ವಾರ ಘೋಷಿಸಿದ್ದರು ಹಾಗೂ ಡೆತ್ ವಾರಂಟ್‌ಗೆ ಸಹಿ ಹಾಕಿದ್ದರು.

ಆದರೆ, ನೇಣಿಗೇರಿಸುವ ದಿನಾಂಕದ 5 ದಿನ ಮೊದಲು ತಿಹಾರ್ ಕಾರಾಗೃಹದ ಅಧಿಕಾರಿಗಳು, ಎಲ್ಲ ಕ್ಷಮಾದಾನದ ಅರ್ಜಿ ವಿಲೇವಾರಿ ಆಗದ ಹೊರತು ಗಲ್ಲಿಗೇರಿಸಲು ಸಾಧ್ಯವಿಲ್ಲ. ಆದುದರಿಂದ ಹೊಸ ದಿನಾಂಕ ನೀಡುವಂತೆ ಗುರುವಾರ ವಿನಂತಿಸಿದ್ದರು.

ಇತರ ಮೂವರು ದೋಷಿಗಳು ಇದುವರೆಗೆ ತಮ್ಮ ಕ್ಷಮಾದಾನ ಅರ್ಜಿ ಸಲ್ಲಿಸಿಲ್ಲ. ಅವರು ಯಾವಾಗ ಬೇಕಾದರೂ ಸಲ್ಲಿಸಬಹುದು. ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಬಳಿಕ ದೋಷಿಗೆ ಮರಣ ದಂಡನೆಗೆ ಮುನ್ನ 14 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಇಬ್ಬರು ದೋಷಿಗಳಾದ ಮುಖೇಶ್ ಸಿಂಗ್ ಹಾಗೂ ವಿನಯ್ ಶರ್ಮಾ ಅವರು ತಮಗೆ ವಿಧಿಸಿದ ಮರಣದಂಡನೆ ವಿರುದ್ಧ ಕಾನೂನು ನೆಲೆಯ ಮನವಿಯ ಅವಕಾಶ ಮುಗಿದಿದೆ. ಅವರ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ನಾಲ್ವರು ದೋಷಿಗಳು ನಿರಾಶೆಗೊಳಗಾಗಿದ್ದಾರೆ ಹಾಗೂ ಈ ಹಂತದಲ್ಲಿ ಕ್ಯುರೇಟಿವ್ ಅರ್ಜಿ, ಕ್ಷಮಾದಾನದ ಮನವಿಯನ್ನು ಉದ್ದೇಶಪೂರ್ವಕವಾಗಿ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ವಿಳಂಬಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News