2ನೇ ಏಕದಿನ: ಭಾರತದ ಮೀಸಲು ವಿಕೆಟ್‌ಕೀಪರ್ ಆಗಿ ಭರತ್ ಸೇರ್ಪಡೆ

Update: 2020-01-17 09:31 GMT
ರಿಷಭ್ ಪಂತ್, ಕೆ.ಎಸ್. ಭರತ್

 ಹೊಸದಿಲ್ಲಿ, ಜ.17: ಹೆಲ್ಮೆಟ್‌ಗೆ ಚೆಂಡು ಬಡಿದ ಕಾರಣ ಗಾಯಗೊಂಡಿದ್ದ ರಿಷಭ್ ಪಂತ್ ಬದಲಿಗೆ ಆಂಧ್ರಪ್ರದೇಶದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೆ.ಎಸ್. ಭರತ್ ಶುಕ್ರವಾರ ಆಸ್ಟ್ರೇಲಿಯ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಸೇರ್ಪಡೆಯಾಗಿದ್ದಾರೆ.

26ರ ಹರೆಯದ ಭರತ್ ಈ ತನಕ ಅಂತರ್‌ರಾಷ್ಟ್ರೀಯ ಪಂದ್ಯ ಆಡಿಲ್ಲ. ಅವರು 74 ಪ್ರಥಮ ದರ್ಜೆ ಪಂದ್ಯಗಳಲ್ಲಿ 4,143 ರನ್ ಗಳಿಸಿದ್ದು, ಟ್ವೆಂಟಿ-20ಯಲ್ಲಿ 100ಕ್ಕೂ ಸ್ಟ್ರೈಕ್‌ರೇಟ್‌ನಲ್ಲಿ ರನ್ ಕಲೆಹಾಕಿದ್ದಾರೆ.

‘‘ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯಕ್ಕೆ ಕೆ.ಎಸ್. ಭರತ್‌ರನ್ನು ಮೀಸಲು ವಿಕೆಟ್‌ಕೀಪರ್ ಆಗಿ ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ನೇಮಕ ಮಾಡಿದೆ. ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ನ್ಯೂಝಿಲ್ಯಾಂಡ್‌ಗೆ ಪ್ರವಾಸ ಕೈಗೊಂಡಿರುವ ಭಾರತ ‘ಎ’ ತಂಡದೊಂದಿಗೆ ತೆರಳಿದ್ದಾರೆ. ಹೀಗಾಗಿ ಭರತ್‌ರನ್ನು ಮೀಸಲು ವಿಕೆಟ್‌ಕೀಪರ್ ಆಗಿ ಆಯ್ಕೆ ಸಮಿತಿ ನೇಮಿಸಿದೆ’’ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.

 ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಆಸ್ಟ್ರೇಲಿಯದ ವೇಗಿ ಕಮಿನ್ಸ್ ಎಸೆದಿದ್ದ ಬೌನ್ಸರ್ ಪಂತ್ ಹೆಲ್ಮೆಟ್‌ಗೆ ತಾಗಿದ ಕಾರಣ ಅವರ ತಲೆಗೆ ಜಜ್ಜಿದ ಗಾಯವಾಗಿತ್ತು. ಅವರೀಗ ಬೆಂಗಳೂರಿನ ಎನ್‌ಸಿಎಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕೊನೆಯ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News