NPRಗೆ ಆಧಾರ್ ಮಾಹಿತಿ ಸಂಗ್ರಹ: ಗೃಹ ಸಚಿವಾಲಯದ ಸ್ಪಷ್ಟೀಕರಣ-ಅಧಿಕೃತ ದಾಖಲೆಗಳ ಮಾಹಿತಿಯಲ್ಲಿ ವ್ಯತ್ಯಾಸ

Update: 2020-01-17 12:01 GMT

ಹೊಸದಿಲ್ಲಿ: ನ್ಯಾಶನಲ್ ಪಾಪ್ಯುಲೇಶನ್ ರಿಜಿಸ್ಟರ್ ಅಥವಾ ಎನ್‍ ಪಿಆರ್ ಗಾಗಿ ಮಾಹಿತಿ ಸಂಗ್ರಹಿಸುವಾಗ ಆಧಾರ್ ಸಂಖ್ಯೆಗಳನ್ನು ಹೊಂದಿರುವವರಿಂದ ಅದನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುವುದು ಎಂಬ ವರದಿಯನ್ನು ಗೃಹ ಸಚಿವಾಲಯ ನಿರಾಕರಿಸಿದೆಯಾದರೂ ಸಚಿವಾಲಯದ ಅಧೀನದಲ್ಲಿಯೇ ಕಾರ್ಯಾಚರಿಸುವ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಕಚೇರಿಯಲ್ಲಿರುವ ಜುಲೈ 19,  2019ರ ದಾಖಲೆಗಳು ಇದಕ್ಕೆ ತದ್ವಿರುದ್ಧವಾಗಿದೆ. ಇದರ ಪ್ರಕಾರ ಈಗಿನ ಎನ್‍ ಪಿಆರ್‍ ಡಾಟಾ ಬೇಸ್‍ ನಲ್ಲಿಲ್ಲದ ಆಧಾರ್ ಸಂಖ್ಯೆಗಳನ್ನು ಇತರ ಮಾಹಿತಿಗಳೊಂದಿಗೆ ಸಂಗ್ರಹಿಸಲಾಗುವುದು ಎಂದು thewire.in ವರದಿ ಮಾಡಿದೆ.

thewire.in ಸಂಗ್ರಹಿಸಿರುವ ದಾಖಲೆಗಳ ಪ್ರಕಾರ ಎನ್‍ ಪಿಆರ್ ಡಾಟಾಬೇಸ್‍ ನಲ್ಲಿ ಅಂದಾಜು 60 ಕೋಟಿ ಆಧಾರ್ ಸಂಖ್ಯೆಗಳನ್ನು ಈಗಾಗಲೇ ಸೇರಿಸಲಾಗಿದೆ

ನಾಗರಿಕರಿಗೆ ರಾಷ್ಟ್ರೀಯ ಗುರುತು ಕಾರ್ಡ್ ನೀಡುವ ಉದ್ದೇಶದಿಂದ ರಿಜಿಸ್ಟ್ರಾರ್ ಜನರಲ್ ಅವರ ಕಚೇರಿ 2010ರಲ್ಲಿ ಎನ್‍ಪಿಆರ್ ಗಾಗಿ ದತ್ತಾಂಶ ಸಂಗ್ರಹಿಸಿತ್ತು. ಇದಕ್ಕೆ ಪೂರಕವೆಂಬಂತೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ 2010ರಿಂದ ಆಧಾರ್ ಸಂಖ್ಯೆಗಳನ್ನು ನೀಡಲು ಆರಂಭಿಸಿತ್ತು.

ಗೃಹ ವ್ಯವಹಾರಗಳ ಸಚಿವಾಲಯ 2015ರಲ್ಲಿ ಎನ್‍ ಪಿಆರ್ ಅಪ್ಡೇಟ್ ಮಾಡಿದ ಸಂದರ್ಭ ಆಧಾರ್ ಸಂಖ್ಯೆ ಸೇರಿದಂತೆ ಬೃಹತ್ ದತ್ತಾಂಶ ಸಂಗ್ರಹಿಸಿದ್ದರೂ ಈ ದತ್ತಾಂಶವನ್ನು 'ಗೌಪ್ಯತಾ' ಕಾರಣಗಳನ್ನು ನೀಡಿ ರಾಜ್ಯಗಳೊಂದಿಗೆ ಶೇರ್ ಮಾಡಲು ನಿರಾಕರಿಸಿದಾಗ ಈ ಪ್ರಕ್ರಿಯೆಗೆ ಅಡ್ಡಿ ಎದುರಾಗಿತ್ತು.  ಇದರಿಂದಾಗಿ ಎನ್‍ ಪಿಆರ್ ಹಾಗೂ ಆಧಾರ್ ದತ್ತಾಂಶ ಕೇವಲ ಕೇಂದ್ರದ ಸೊತ್ತಾಗಿ ಪರಿಣಮಿಸಿತ್ತು.

ಆಧಾರ್ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಗಮನದಲ್ಲಿರಿಸಿ ಎನ್‍ಪಿಆರ್ ಪ್ರಕ್ರಿಯೆ ಸಂದರ್ಭ ಆಧಾರ್ ಸಂಖ್ಯೆ ಸಂಗ್ರಹಕ್ಕೆ ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯದ ಅನುಮತಿಯನ್ನು ರಿಜಿಸ್ಟ್ರಾರ್ ಜನರಲ್ ಕಚೇರಿ  ಕೇಳಿತ್ತು.

"ಎನ್‍ ಪಿಆರ್ ಪ್ರಕ್ರಿಯೆ ವೇಳೆ ಆಧಾರ್, ಪಾಸ್ಪೋರ್ಟ್ ಸಂಖ್ಯೆ, ಮತದಾರರ ಗುರುತು ಪತ್ರ ಹಾಗೂ ವಾಹನ ಚಾಲನಾ ಪರವಾನಗಿ ಸಂಖ್ಯೆ ಇದ್ದರೆ ಅವುಗಳನ್ನು ನೀಡುವುದು ಕಡ್ಡಾಯ'' ಎಂಬ ಟೈಮ್ಸ್ ಆಫ್ ಇಂಡಿಯಾ ವರದಿಕೆ ಪ್ರತಿಕ್ರಿಯಿಸಿದ ಸಚಿವಾಲಯದ ವಕ್ತಾರೆ, "ಈ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ತಪ್ಪು ಅಭಿಪ್ರಾಯವನ್ನು ವರದಿ ಮೂಡಿಸುತ್ತದೆ, ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ. ಆದರ  ಅದನ್ನು ಪ್ರಸ್ತುತಪಡಿಸಲು ಬಯಸುವವರು ಮಾಡಬಹುದು, ಯಾವುದೇ ಬಲವಂತವಿಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News