ಉಡುಪಿ ಪರ್ಯಾಯ: ಶ್ರೀಕೃಷ್ಣ ಪೂಜೆಯ ಅಧಿಕಾರ ಶನಿವಾರ ಹಸ್ತಾಂತರ

Update: 2020-01-17 14:22 GMT

ಉಡುಪಿ: ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆ ಉಡುಪಿಯಲ್ಲಿ ಸ್ಥಾಪಿಸಿದ ಶ್ರೀಕೃಷ್ಣನ ಪೂಜೆಯ ಅಧಿಕಾರ ಹಸ್ತಾಂತರದ ಮತ್ತೊಂದು ಅಧ್ಯಾಯ ಶನಿವಾರ ಮುಂಜಾನೆ ಹಕ್ಕಿಗಳು ಚಿಲಿಪಿಲಿಗುಟ್ಟುವ ಹೊತ್ತು 5:57ಕ್ಕೆ ಸರಿಯಾಗಿ ನಡೆಯಲಿದೆ. ಇದೇ ಪರ್ಯಾಯದಲ್ಲಿ ಶ್ರೀಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರ ಕಾರ್ಯಕ್ರಮ.

ಈ ಬಾರಿ 2018ರ ಜ.18ರಿಂದ ಎರಡು ವರ್ಷಗಳ ಕಾಲ ಎರಡನೇ ಬಾರಿಗೆ ಶ್ರೀಕೃಷ್ಣನ ಪೂಜೆಯನ್ನು ಯಶಸ್ವಿಯಾಗಿ ಪೂರೈಸಿರುವ ಸಂತೃಪ್ತಿ ಯೊಂದಿಗೆ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ತಮ್ಮ ಚೊಚ್ಚಲ ಪರ್ಯಾಯಕ್ಕೆ ಸಜ್ಜಾಗಿ ಬಂದಿರುವ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವುಠದ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಪರ್ಯಾಯ ಎಂಬುದು ಮಧ್ವಾಚಾರ್ಯರು ಆರಂಭಿಸಿದ ಅಷ್ಟಮಠಗಳ ಆಡಳಿತಕ್ಕೆ ಸಂಬಂಧ ಪಟ್ಟ ವ್ಯವಸ್ಥೆ. ಆರಂಭದಲ್ಲಿ ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ವ್ಯವಸ್ಥೆಯನ್ನು ಎರಡು ವರ್ಷಗಳಿಗೆ ನಡೆಯುವಂತೆ ಮಾಡಿದವರು ಸೋದೆ ಮಠದ ಶ್ರೀವಾದಿರಾಜ ಗುರುಗಳು. ಇದು ಪ್ರಾರಂಭಗೊಂಡಿದ್ದು 1522ರಲ್ಲಿ ಅಂದರೆ ಇಂದಿಗೆ ಸರಿಯಾಗಿ 498 ವರ್ಷಗಳ ಹಿಂದೆ. ಪಲಿಮಾರುಶ್ರೀಗಳು ಈಗ ಮುಗಿಸಿ ರುವುದು ಮಠದ ಇತಿಹಾಸದ 249ನೇ ದ್ವೈವಾರ್ಷಿಕ ಪರ್ಯಾಯವನ್ನು.

1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ ವ್ಯವಸ್ಥೆ ಪಲಿಮಾರು ಮಠದಿಂದ ಮೊದಲುಗೊಂಡು ಪೇಜಾವರ ಮಠದವರೆಗೆ ಪ್ರತಿ 16 ವರ್ಷಗಳಿಗೊಮ್ಮೆ ಒಂದೊಂದು ಚಕ್ರವನ್ನು ಪೂರ್ಣಗೊಳಿಸುತ್ತದೆ. 2016-18ರಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳು ನಡೆಸಿದ ತನ್ನ ದಾಖಲೆಯ ಐದನೇ ಪರ್ಯಾಯದೊಂದಿಗೆ 31ನೇ ಚಕ್ರ (ಒಟ್ಟು 248 ಪರ್ಯಾಯ) ಪೂರ್ಣ ಗೊಂಡಿದೆ. ಇಂದು ಪಲಿಮಾರುಶ್ರೀಗಳು ಮುಗಿಸಿ ರುವುದು 32ನೇ ಚಕ್ರದ ಮೊದಲ ಪರ್ಯಾಯವನ್ನು. ಇಂದು ಅದಮಾರುಶ್ರೀಗಳು ನಡೆಸಲು ಹೊರಟಿರುವುದು ಇತಿಹಾಸದ 250ನೇ ಪರ್ಯಾಯವನ್ನು. 2022ರ ಜ.18ರಂದು ಅವರು ಕೃಷ್ಣಾಪುರ ಮಠದ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸುವ ವೇಳೆ ಪರ್ಯಾಯದ 500 ವರ್ಷಗಳು ಪೂರ್ಣಗೊಂಡಿರುತ್ತದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ, ಕರಾವಳಿ ಜಿಲ್ಲೆಗಳ ನಾಡಹಬ್ಬ ವೆಂದೇ ಕರೆಯಲಾಗುವ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಉತ್ಸವಕ್ಕೆ ಉಡುಪಿ ಮತ್ತೊಮ್ಮೆ ಸಜ್ಜಾಗಿದೆ. ಇದು ಉಡುಪಿ ಸಾಕ್ಷಿಯಾಗುತ್ತಿರುವ 250ನೇ ದ್ವೈವಾರ್ಷಿಕ ಪರ್ಯಾಯ ಮಹೋತ್ಸವ. ಕಳೆದೆರಡು ವರ್ಷಗಳಲ್ಲಿ ಕೃಷ್ಣ ಮಠವನ್ನು ಸ್ವರ್ಣಮಯಗೊಳಿಸಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಜ.18ರ ಮುಂಜಾನೆ 5:57ಕ್ಕೆ ಶ್ರೀಕೃಷ್ಣನ ಪೂಜೆಯ ಅಧಿಕಾರ ಹಸ್ತಾಂತರದ ದ್ಯೋತಕವಾದ ಅಕ್ಷಯ ಪಾತ್ರೆ, ಸಟುಗ ಹಾಗೂ ಮಠದ ಕೀಲಿಕೈಯನ್ನು ಅದವಾರುಶ್ರೀಗಳಿಗೆ ಹಸ್ತಾಂತರಿಸಲಿದ್ದಾರೆ.

ಅಲ್ಲಿಗೆ 2014ರ ಜು.19ರಂದು ಪಾಜಕ ಸಮೀಪದ ಕುಂಜಾರುಗಿರಿಯಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರಿಂದ ಸನ್ಯಾಸತ್ವವನ್ನು ಸ್ವೀಕರಿಸಿರುವ ಇಂಜಿನಿಯರಿಂಗ್ ಪದವೀಧರರಾದ ಅದಮಾರು ಮಠದ ಕಿರಿಯ ಯತಿಗಳಾದ 29ರ ಹರೆಯದ ಶ್ರೀಈಶಪ್ರಿಯ ತೀರ್ಥರು ಮೊದಲ ಬಾರಿಗೆ ಮಧ್ವ (ಸರ್ವಜ್ಞ) ಪೀಠಾರೋಹಣ ಮಾಡುವರು. ಇದರೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅದಮಾರು ಕಿರಿಯ ಯತಿಗಳೇ ಶ್ರೀಕೃಷ್ಣನ ಪೂಜೆಗೆ ಅಧಿಕೃತ ಅಧಿಕಾರ ಪಡೆದಂತಾಗುತ್ತದೆ.

ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತಿದ್ದ ಪಲಿಮಾರುಶ್ರೀಗಳ ಪರ್ಯಾಯದ ಸಮಾರೋಪ ಶುಕ್ರವಾರ ರಾತ್ರಿ ರಥಬೀದಿಯಲ್ಲಿ ಅವರಿಗೆ ಅದಮಾರು ಮಠದ ಪರ್ಯಾಯ ಸಮಿತಿಯಾದ ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಅಭಿನಂದಿಸುವ ಮೂಲಕ ಮುಕ್ತಾಯಗೊಂಡಿದೆ.

ಇಂದು ಪರ್ಯಾಯ ಪೀಠದಿಂದ ಇಳಿಯುತ್ತಿರುವ ಶ್ರೀವಿದ್ಯಾಧೀಶ ತೀರ್ಥರು 2002-04ರಲ್ಲಿ ಮೊದಲ ಬಾರಿ ಪರ್ಯಾಯವನ್ನು ಏರಿದ್ದು, ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಚಿಣ್ಣರ ಸಂತರ್ಪಣೆಯಂಥ ಉಪಯುಕ್ತ ಯೋಜನೆ ಪ್ರಾರಂಭಿಸಿದ್ದರು. ಅದು ಈಗಲೂ ನಿರಂತರಾಗಿ ಮುಂದುವರಿದುಕೊಂಡು ಬಂದಿದೆ.

ಅದೇ ರೀತಿ ಕಳೆದ ಬಾರಿ ಶ್ರೀಕೃಷ್ಣನಿಗೆ ವಜ್ರಕವಚ ತೊಡಿಸಿದ ಪಲಿಮಾರು ಶ್ರೀಗಳು ಈ ಬಾರಿ ಶ್ರೀಕೃಷ್ಣನ ಗರ್ಭಗುಡಿಯ ಮೇಲ್ಚಾವಣಿಗೆ ಚಿನ್ನದ ಹೊದಿಕೆ (ಸುಮಾರು 100ಕೆ.ಜಿ.ಚಿನ್ನದಿಂದ), ಚಿಣ್ಣರ ಸಂತರ್ಪಣೆ ಇನ್ನಷ್ಟು ಶಾಲೆಗಳಿಗೆ ವಿಸ್ತರಣೆ, ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ಚಿಣ್ಣರ ಮಾಸ, ಪ್ರತಿದಿನ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ, ನಿರಂತರ ಭಜನೆಯಂಥ ಸಂಕಲ್ಪ ಗಳನ್ನು ಪೂರ್ಣ ಗೊಳಿಸಿದ್ದಾರೆ.

ಬಿಗುಭದ್ರತೆ: ಪರ್ಯಾಯದ ಸಂಭ್ರಮಕ್ಕಾಗಿ ಉಡುಪಿ ನಗರ ಸಂಪೂರ್ಣ ಸಜ್ಜಾಗಿ ನಿಂತಿದೆ. ಎಲ್ಲೆಲ್ಲೂ ತಳಿರುತೋರಣ, ಸ್ವಾಗತ ಗೋಪುರ, ಕಮಾನುಗಳು, ಮಾರ್ಗದುದ್ದಕ್ಕೂ ಸ್ವಾಗತ ಕೋರುವ ಬಟ್ಟೆಯ ಬ್ಯಾನರ್‌ಗಳು ನಾಗರಿಕರನ್ನು ಎದುರುಗೊಳ್ಳುತ್ತಿವೆ. ನಗರದ ಪ್ರತಿಯೊಂದು ಕಟ್ಟಡಗಳು ರಂಗುರಂಗಿನ ಬಣ್ಣ ತಳೆದು ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಮದುಮಗಳಂತೆ ಸಿಂಗರಿಸಿ ಕೊಂಡಿವೆ.

ಪರ್ಯಾಯ ಶಾಂತಿಯುತವಾಗಿ ನಡೆಯಲು ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಆಸುಪಾಸಿನ ಜಿಲ್ಲೆಗಳಿಂದ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಸರಗಳ್ಳರು, ಜೇಬುಗಳ್ಳರು ಹಾಗೂ ಕಿಡಿಗೇಡಿಗಳ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಗರದಲ್ಲಿ ಗಸ್ತು ತಿರುಗುತಿದ್ದಾರೆ.

ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು, ಪ್ರವಾಸಿಗರು ಈ ಬಾರಿಯ ಪರ್ಯಾಯವನ್ನು ವೀಕ್ಷಿಸುವ ನಿರೀಕ್ಷೆಯನ್ನು ಶ್ರೀಕೃಷ್ಣ ಸೇವಾ ಬಳಗ ವ್ಯಕ್ತಪಡಿಸಿದೆ.

ಉಡುಪಿ ಪರ್ಯಾಯ ಎಂದರೆ..

ಉಡುಪಿಯ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು (1238-1317) 1285ರ ಮಕರ ಸಂಕ್ರಮಣ ದಿನದಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಮಧ್ವಾಚಾರ್ಯರೇ ಎಂಟು ಮಂದಿ ಶಿಷ್ಯರಿಗೆ ಎಂಟು ಮಠಗಳನ್ನು ನೀಡಿ ಅವರ ಮೂಲಕ ಶ್ರೀಕೃಷ್ಣನಿಗೆ ಎರಡೆರಡು ತಿಂಗಳ ಅವಧಿಯ ಸರದಿ ಪೂಜೆಯ ಅವಕಾಶ ಕಲ್ಪಸಿದ್ದರೆಂದು ಹೇಳಲಾಗುತ್ತಿದೆ.

ಆದರೆ ಸೋದೆ ಮಠಾಧೀಶರಾದ ಶ್ರೀವಾದಿರಾಜ ಗುರುಗಳು (1480-1600) ತಮ್ಮ ಕಾಲಾವಧಿಯಲ್ಲಿ ಎರಡು ತಿಂಗಳ ಪರ್ಯಾಯ ಅವಧಿಯನ್ನು ಎರಡು ವರ್ಷಗಳಿಗೆ ಬದಲಿಸಿದರು. ಅವರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಪದ್ಧತಿ 1522-24ರಿಂದ ಇದುವರೆಗೆ ಚಾಚೂ ತಪ್ಪದೇ ನಡೆದುಕೊಂಡು ಬಂದಿದೆ. ಅಂದು ವಾದಿರಾಜ ಗುರುಗಳು ಹಾಕಿಕೊಟ್ಟ ಕ್ರಮ ದಲ್ಲೇ ಅವು ಮುಂದುವರಿಯುತ್ತಿದೆ. ಪ್ರತಿ 16 ವರ್ಷಗಳಿಗೆ ಅಷ್ಟಮಠಗಳ ಪರ್ಯಾಯದ ಒಂದೊಂದು ಚಕ್ರ ಪೂರ್ಣಗೊಳ್ಳುತ್ತಿದೆ.

ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಮಧ್ವ ಶಿಷ್ಯರ ಆಶ್ರಮ ಜ್ಯೇಷ್ಠತೆ ಯಂತೆ ಪಲಿಮಾರು ಮಠದೊಂದಿಗೆ 1522ರಲ್ಲಿ ಪ್ರಾರಂಭಗೊಂಡು ಅದರ ಬಳಿಕ ಅನುಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಹಾಗೂ ಕೊನೆಯಲ್ಲಿ ಪೇಜಾವರ ಮಠದೊಂದಿಗೆ ಪರ್ಯಾಯದ ಒಂದು ಚಕ್ರ ಮುಗಿಯುತ್ತದೆ. ಇವುಗಳಲ್ಲಿ ಎರಡೆರಡು ಮಠಗಳು ದ್ವಂದ್ವಮಠಗಳಾಗಿ ಪರಿಗಣಿಸಲ್ಪಡುತ್ತವೆ. ಪಲಿಮಾರು-ಅದಮಾರು, ಕೃಷ್ಣಾಪುರ-ಪುತ್ತಿಗೆ, ಶೀರೂರು-ಸೋದೆ ಹಾಗೂ ಕಾಣಿಯೂರು-ಪೇಜಾವರ ಮಠಗಳು ದ್ವಂದ್ವ ಮಠಗಳಾಗಿವೆ.

ಹೀಗೆ ಸಾಗಿಬಂದ ಪರ್ಯಾಯ 2018ರಲ್ಲಿ ತನ್ನ 31ನೇ ಚಕ್ರವನ್ನು ಪೂರ್ಣಗೊಳಿಸಿದೆ. 2016-2018ರಲ್ಲಿ ಪೇಜಾವರ ಮಠದ ಪರ್ಯಾಯ ದವರೆಗೆ ಎಲ್ಲಾ ಮಠಗಳು ಸರದಿಯಂತೆ 31 ಪರ್ಯಾಯಗಳನ್ನು ಪೂರ್ಣ ಗೊಳಿಸಿವೆ. 2018 ಜ.18ರಿಂದ 32ನೇ ಪರ್ಯಾಯ ಚಕ್ರ ಪ್ರಾರಂಭ ಗೊಂಡಿದ್ದು, ಇದೀಗ ಮೊದಲನೇಯದಾಗಿ ಪಲಿಮಾರು ಪರ್ಯಾಯ ಮುಗಿದಿದೆ.

1522ರಿಂದ ಪ್ರಾರಂಭಗೊಂಡು ಇಂದಿನವರೆಗೆ 498 ವರ್ಷಗಳು ಕಳೆದಿದ್ದು 249 ಪರ್ಯಾಯಗಳು ಮುಕ್ತಾಯಗೊಂಡಿವೆ. ಇಂದು ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು 250ನೇ ಪರ್ಯಾಯ ನಡೆಸುವ ಸುಯೋಗ ಹೊಂದಿದ್ದಾರೆ. 2022ರ ಜ.18ರಂದು ಪರ್ಯಾಯದ 500 ರ್ಷಗಳು ಮುಕ್ತಾಯಗೊಳ್ಳಲಿವೆ.

ಅದಮಾರು ಮಠದ ಯತಿ ಪರಂಪರೆ

ಆಚಾರ್ಯ ಮಧ್ವರು 800 ವರ್ಷಗಳ ಹಿಂದೆ ಸ್ಥಾಪಿಸಿದ ಎಂಟು ಮಠಗಳ ಪೈಕಿ ಅದಮಾರು ಮಠದ 32ನೇ ಯತಿಗಳು ಇಂದು ಸರ್ವಜ್ಞ ಪೀಠವೇರಿದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು. ಮಧ್ವರ ಶಿಷ್ಯರಲ್ಲಿ ಆಶ್ರಮ ಜ್ಯೇಷ್ಠತೆಯಲ್ಲಿ ಎರಡನೇಯವರಾದ ಶ್ರೀನರಸಿಂಹತೀರ್ಥರು ಶ್ರೀಮಠದ ಮೊದಲ ಯತಿಗಳು.

ಅದಮಾರು ಮಠದ ಮೂಲ ಮಠ ಕಾಪು ತಾಲೂಕಿನ ಅದಮಾರಿನಲ್ಲಿದೆ. ಈ ಮಠದ ಮೂಲ ದೇವರು ಚತುರ್ಭುಜ ಕಾಳೀಯ ಮರ್ಧನ ಕೃಷ್ಣ. ಈ ಪರಂಪರೆಯಲ್ಲಿ ಶ್ರೇಷ್ಠ ಯತಿಗಳೆಂದು ಎಲ್ಲರಿಂದ ಮಾನ್ಯತೆ ಪಡೆದವರು 29ನೇಯವರಾದ ಶ್ರೀವಿಬುಧಪ್ರಿಯ ತೀರ್ಥರು. 31ನೇ ಯತಿಗಳಾದ ಶ್ರೀವಿಬುಧೇಶತೀರ್ಥರು ಅದಮಾರು ಶಿಕ್ಷಣ ಸಂಸ್ಥೆಗಳ ಜನಕರು ಹಾಗೂ ವಿದ್ಯೆಗೆ ವಿಶೇಷ ಆದ್ಯತೆ ನೀಡಿದ ಯತಿಶ್ರೇಷ್ಠರು.

ಸರ್ವಜ್ಞ ಪೀಠವೇರುವ ಶ್ರೀಈಶಪ್ರಿಯತೀರ್ಥರು

ಸನ್ಯಾಸಾಶ್ರಯ ಸ್ವೀಕರಿಸಿದ ಕೇವರ ಐದನೇ ವರ್ಷಕ್ಕೆ ಮೊದಲ ಬಾರಿ ಪರ್ಯಾಯ ಪೀಠಾರೋಹಣ ಮಾಡಿದ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಹೆಸರು ಶ್ರೀಶ ಎಸ್. ಇವರು ಹುಟ್ಟೂರು ಹಿರಿಯಡ್ಕ ಸಮೀಪದ ಶೀರೂರು. ಚಂದ್ರಶೇಖರ ಎಸ್. ಹಾಗೂ ಗೌರಿ ದಂಪತಿಗಳ ಪುತ್ರರಾಗಿ 1985ರ ಮಾ.20ರಂದು ಜನಿಸಿದ ಶ್ರೀಶ ಇವರ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆದುದು ತೀರ್ಥಹಳ್ಳಿಯಲ್ಲಿ. ಬಳಿಕ ಶಿವಮೊಗ್ಗದಲ್ಲಿ ಇವರು ಇಂಜಿನಿಯರಿಂಗ್ ಪದವಿಯನ್ನು ಪಡೆದರು.

ಲೌಕಿಕ ಶಿಕ್ಷಣ ಪಡೆಯುತಿದ್ದಾಗಲೇ ಆದ್ಯಾತ್ಮಿಕದತ್ತ ಒಲವು ಹೊಂದಿದ್ದ ಶ್ರೀಶ, ಪದವಿಯ ಬಳಿಕ ವ್ಯವಹಾರದ ಬದುಕಿಗೆ ವಿದಾಯ ಹೇಳಿ ವೇದವೇದಾಂತಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಧ್ಯಾತ್ಮದಲ್ಲಿ ಇವರ ಆಸಕ್ತಿಯನ್ನು ಗಮನಿಸಿದ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಇವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು. 2014ರ ಜು.19 ರಂದು ಮಧ್ವಾಚಾರ್ಯರು ಜನಿಸಿದ ಪಾಜಕದ ಕುಂಜಾರುಗಿರಿಯ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ತಮ್ಮ 29ರ ಹರೆಯದಲ್ಲಿ ಸಂನ್ಯಾಸಾಶ್ರಮ ಸ್ವೀಕರಿಸಿದ ಶ್ರೀಶರಿಗೆ ಶ್ರೀಈಶಪ್ರಿಯ ತೀರ್ಥ ಎಂದು ನಾಮಕರಣ ಮಾಡಲಾಯಿತು.

ತಮ್ಮ ಗುರುಗಳಾದ ಶ್ರೀವಿಬುಧೇಶತೀರ್ಥರಂತೆ ಎರಡು ಪರ್ಯಾಯಗಳನ್ನು ತಾವು ನಡೆಸಿ ಮೂರನೇ ಪರ್ಯಾಯವನ್ನು ಶಿಷ್ಯನಿಂದ ಮಾಡಿಸುವ ಅದಮಾರು ಮಠದ ಪರಂಪರೆಯಂತೆ ಈಗಾಗಲೇ ಎರಡು ಪರ್ಯಾಯ ನಡೆಸಿದ ಶ್ರೀವಿಶ್ವಪ್ರಿಯ ತೀರ್ಥರು ಇದೀಗ ಮೂರನೇ ಪರ್ಯಾಯವನ್ನು ಶಿಷ್ಯನಿಂದ ನಡೆಸಲು ನಿರ್ಧರಿಸಿ, ಈ ಬಾರಿ ಶ್ರೀಈಶಪ್ರಿಯ ತೀರ್ಥರನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಲು ಸಂಕಲ್ಪತೊಟ್ಟು ಅದನ್ನೀಗ ಶಿಷ್ಯನ ಮೂಲಕ ಈಡೇರಿಸಿಕೊಳ್ಳುತಿದ್ದಾರೆ.

ಶ್ರೀಈಶಪ್ರಿಯ ತೀರ್ಥರು ಈಗಾಗಲೇ ಕೆಲವು ವಿಷಯಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಸಾವಯವ ಆಹಾರಧಾನ್ಯ ಗಳ ಬಳಕೆ, ಮಳೆನೀರು ಕೊಯ್ಲು ಪ್ರಯೋಗ, ಪರ್ಯಾಯ ದರ್ಬಾರ್ ಮತ್ತು ಹೊರೆಕಾಣಿಕೆ ಸಮರ್ಪಣೆಯಲ್ಲಿ ಹೊಸನಗಳನ್ನು ಅಳವಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News