ಅದಮಾರು ಪರ್ಯಾಯ: ವೈಭವದ ಮೆರವಣಿಗೆಗೆ ಸಾಕ್ಷಿ ಯಾದ ಸಹಸ್ರಾರು ಮಂದಿ

Update: 2020-01-18 04:47 GMT

ಉಡುಪಿ, ಜ.18: ಅದಮಾರು ಮಠದ ಪರ್ಯಾಯ ಮಹೋತ್ಸವದ ವೈಭವಯುತವಾಗಿ ಶನಿವಾರ ನಸುಕಿನ ವೇಳೆ ನಡೆಯಿತು.

ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ 1:30 ಕ್ಕೆ ಸ್ನಾನ ಮುಗಿಸಿದ ಯತಿಗಳು, 1:40ಕ್ಕೆ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ

2 ಗಂಟೆಗೆ ಜೋಡುಕಟ್ಟೆ ಆಗಮಿಸಿದರು. 2:25ರ ಸುಮಾರಿಗೆ ವೈಭವದ ಮೆರವಣಿಗೆ ಆರಂಭವಾಯಿತು. ಅಲ್ಲಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಹಳೆಯ ಡಯನಾ ಸರ್ಕಲ್,  ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು.

ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು ಕಣ್ಮನ ಸೆಳೆದವು. ಸ್ತಬ್ಧಚಿತ್ರಗಳು, ಚೆಂಡೆಯ ನಾದ ಮೆರವಣಿಗೆಯ ಅಂದ ಹೆಚ್ಚಿಸಿದವು.

ಜಗ್ಗಲಿಕೆ ವಾದ್ಯ, ಶ್ರೀಸಾಯಿ ಚೆಂಡೆ ಬಳಗ, ಪೂಜೆ ಕುಣಿತ ಗೊರವರ ಕುಣಿತ, ಕೊಂಬು ಕಹಳೆ, ತುಳಸಿ ಕಟ್ಟೆ, ಮೂರು ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು‌ ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆಯಾಟ, ಕೊಂಬೆ ಬಳಗ, ಹರೇ ರಾಮ ಹರೇ ಕೃಷ್ಣ, ಪೂರ್ಣಕುಂಭ, ಮಹಿಳೆಯರಿಂದ ಭಜನೆ, ಕ್ಲೀನ್ ಉಡುಪಿ ಗ್ರೀನ್ ಉಡುಪಿ, ಮಾರ್ಪಳ್ಳಿ ಮಹಿಳಾ ಮಂಡಳಿಯಿಂದ ನವಶಕ್ತಿ ವೈಭವ ‌ನೋಡುಗರ ಗಮನ ಸೆಳೆಯಿತು.

ಕುಂಜಾರುಗಿರಿ ಬೆಟ್ಟದ ಟ್ಯಾಬ್ಲೋಗೆ ಮಹಿಳಾ ಚಾಲಕಿಯಾಗಿದ್ದು, ನೆರೆದವರ  ಗಮನ ಸೆಳೆದರು. ಪಂಚವಾದ್ಯ, ವೇದ ಘೋಷ ಮೊಳಗಿತು. ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ರಾಮನಿಗೆ ಪೂಜೆ ಸಲ್ಲಿಸುತ್ತಿರುವ ಶ್ರೀ ರಾಮಮಂದಿರದ ಟ್ಯಾಬ್ಲೋ ಗಮನಸೆಳೆಯಿತು.

ನಸುಕಿನ ವೇಳೆಯಲ್ಲೂ ಸಾವಿರಾರು ಮಂದಿ ರಸ್ತೆ ಬದಿ ನಿಂತು ಪರ್ಯಾಯ ಮೆರವಣಿಗೆ ವೀಕ್ಷಿಸಿದರು.

ಅದಮಾರು ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೊತ್ತುಕೊಂಡು ಬರಲಾಯಿತು. ಕೃಷ್ಣಾಪುರ, ಪೇಜಾವರ ಕಾಣಿಯೂರು, ಸೋದೆ ಶ್ರೀ ಪಲ್ಲಕ್ಕಿಯಲ್ಲಿ ಕುಳಿತುಕೊಂಡಿದ್ದು, ಪಲ್ಲಕ್ಕಿಯನ್ನು ಟ್ಯಾಬ್ಲೋನಲ್ಲಿ ಇರಿಸಲಾಯಿತು.

50 ಕ್ಕೂ ಅಧಿಕ ಟ್ಯಾಬ್ಲೋಗಳು ಆಕರ್ಷಕವಾಗಿದ್ದವು. ಕಲ್ಪನಾ ಚಿತ್ರ ಮಂದಿರದ ಸರ್ಕಲ್‌ನಲ್ಲಿ ಜನರಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.

ಮೆರವಣಿಗೆಯ ಕೊನೆಯಲ್ಲಿ ನಗರಸಭೆಯಿಂದ ನೇಮಕ ಮಾಡಿದ್ದ 80 ಮಂದಿ ಪೌರ ಕಾರ್ಮಿಕರು ಇಡೀ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.

 ಸುರಕ್ಷಿತ ದೃಷ್ಟಿಯಿಂದ ಬಿಗು ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News