ಅದಮಾರು ಶ್ರೀಈಶಪ್ರಿಯ ಸ್ವಾಮೀಜಿಯಿಂದ ಸರ್ವಜ್ಞ ಪೀಠಾರೋಹಣ

Update: 2020-01-18 09:42 GMT

ಉಡುಪಿ, ಜ.18: ಸುಮಾರು 800 ವರ್ಷಗಳ ಹಿಂದೆ ಮಧ್ವ ಮತ ಸಂಸ್ಥಾಪಕ ಶ್ರೀಮಧ್ವಾಚಾರ್ಯರು ಸ್ಥಾಪಿಸಿದ್ದ ಉಡುಪಿ ಶ್ರೀಕೃಷ್ಣ ಮಠದ ಶ್ರೀಕೃಷ್ಣ ಮುಖ್ಯಪ್ರಾಣರ ಪೂಜಾ ಕೈಂಕರ್ಯವನ್ನು ಇಂದು ಬೆಳಗಿನ ಜಾವ ಮೊದಲ ಬಾರಿಗೆ ಪಡೆದ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿದರು. ಅದಮಾರುಶ್ರೀ ಕಳೆದೆರಡು ವರ್ಷಗಳ ಕಾಲ ತನ್ನ ಎರಡನೇ ಪರ್ಯಾಯೋತ್ಸವವನ್ನು ಯಶಸ್ವಿಯಾಗಿ ನಡೆಸಿದ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರಿಂದ ಇಂದು ಮುಂಜಾನೆ 5:47ರ ಸುಮಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ದೀಕ್ಷೆಯನ್ನು ಸ್ವೀಕರಿಸಿದರು.

1522ರಲ್ಲಿ ಸೋದೆ ಮಠದ ವಾದಿರಾಜರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿದ್ದು, ಪರ್ಯಾಯದ 32ನೇ ಚಕ್ರದ ಎರಡನೇ ಪರ್ಯಾಯ ಇದಾಗಿದೆ. ಇಂದು ಅದಮಾರು ಕಿರಿಯ ಯತಿ ಪಲಿಮಾರು ಮಠಾಧೀಶರಿಂದ ಶ್ರೀಕೃಷ್ಣನ ಪೂಜಾ ಹಾಗೂ ಆಡಳಿತ ಅಧಿಕಾರವನ್ನು ಪಡೆದುಕೊಂಡರು.

ಮಾನವ ಪಲ್ಲಕ್ಕಿ: ಪರ್ಯಾಯ ಮಹೋತ್ಸವದ ಸಂಪ್ರದಾಯದಂತೆ ಇಂದು ಬೆಳಗಿನ ಜಾವ 2:30ಕ್ಕೆ ಜೋಡುಕಟ್ಟೆ ಬಳಿ ಪರ್ಯಾಯ ವೆುರವಣಿಗೆ ಆರಂಭಗೊಂಡಿದ್ದು, ಭಾಗವಹಿಸಿದ ಐದು ಮಂದಿ ಮಠಾಧೀಶರಲ್ಲಿ ಪರ್ಯಾಯ ಪೀಠವೇರುವ ಅದಮಾರುಶ್ರೀ ಮಾತ್ರ ಈ ಬಾರಿ ಮಾನವ ಹೊರುವ (ಅಡ್ಡಪಲ್ಲಕ್ಕಿ) ಪಲ್ಲಕ್ಕಿಗಳಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದರು. ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಯುವಕರು ಉತ್ಸಾಹದಿಂದ ಸ್ವಾಮೀಜಿಯ ಮೇನೆಯನ್ನು ಹೊತ್ತು ಜೋಡುಕಟ್ಟೆಯಿಂದ ರಥಬೀದಿಯವರೆಗೆ ಸಾಗಿಬಂದರು.

ಉಳಿದಂತೆ ಮೆರವಣಿಗೆಯಲ್ಲಿ ಭಾಗವಹಿಸಿದ ಕೃಷ್ಣಾಪುರ, ಪೇಜಾವರ, ಕಾಣಿಯೂರು ಹಾಗೂ ಸೋದೆ ಮಠಾಧೀಶರು ವಾಹನಗಳಲ್ಲಿರಿಸಿದ ಪಲ್ಲಕ್ಕಿಗಳಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ವಿಶಿಷ್ಟ ಪಲ್ಲಕ್ಕಿ ಮೂಲಕ ಗಮನ ಸೆಳೆದರು. ಮಧ್ವಾಚಾರ್ಯರು ವಿದ್ಯಾಭ್ಯಾಸ ಮಾಡಿದ ಕಾಪು ಸಮೀಪದ ದಂಡತೀರ್ಥದಲ್ಲಿ ಸ್ನಾನ ಮುಗಿಸಿದ ಬಂದ ಸ್ವಾಮೀಜಿ, ಅಷ್ಟಮಠಗಳ ಪೈಕಿ ನಾಲ್ಕು ಮಠಗಳ ನಾಲ್ವರು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಾದ ಚತುರ್ಭುಜ ಕಾಳಿಂಗ ಮರ್ದನ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ವಿವಿಧ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ ಎಲ್ಲಾ ಸ್ವಾಮೀಜಿಗಳು ಅಲಂಕೃತ ಪಲ್ಲಕ್ಕಿಯಲ್ಲಿ ಕುಳಿತು ಭವ್ಯ ಮೆರವಣಿಗೆಯಲ್ಲಿ ಕೋರ್ಟು ರಸ್ತೆ, ಕೆಎಂ ಮಾರ್ಗ, ಕನಕದಾಸ ರಸ್ತೆ ಮಾರ್ಗವಾಗಿ ರಥಬೀದಿಗೆ ಬಂದರು.

ಕನಕನ ಕಿಂಡಿಯಿಂದ ದರ್ಶನ: ಮೆರವಣಿಗೆ ರಥಬೀದಿ ತಲುಪಿದಾಗ ಮಠಾಧೀಶರು ಪಲ್ಲಕ್ಕಿಯಿಂದ ಇಳಿದು ನೆಲಕ್ಕೆ ಹಾಸಿದ ನಡೆಮುಡಿಯ ಮೇಲೆ ಸಾಗಿ ಕನಕಗೋಪುರದ ಬಳಿ ಬಂದರು. ಅದಮಾರುಶ್ರೀ ಕನಕನ ಕಿಂಡಿ ಮೂಲಕ ಮೊದಲು ಕೃಷ್ಣನ ದರ್ಶನ ಪಡೆದರು. ಬಳಿಕ ಅವರು ಚಂದ್ರವೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮುಂಜಾನೆ 5:15ರ ಸುಮಾರಿಗೆ ಶ್ರೀಕೃಷ್ಣ ಮಠ ಪ್ರವೇಶಿಸಿದರು.

ಅಧಿಕಾರ ಹಸ್ತಾಂತರ: ಶ್ರೀಮಠದ ಪ್ರವೇಶ ದ್ವಾರದಲ್ಲಿ ಪಲಿಮಾರು ಮಠದ ಉಭಯಶ್ರೀಗಳು ಅದಮಾರುಶ್ರೀಯನ್ನು ಆತ್ಮೀಯವಾಗಿ ಸ್ವಾಗತಿಸಿ ಮಠದೊಳಗೆ ಕರೆತಂದು ನವಗ್ರಹ ಕಿಂಡಿಯ ಮೂಲಕ ಅವರಿಗೆ ಕೃಷ್ಣನ ದರ್ಶನ ಮಾಡಿಸಿದರು. ಬಳಿಕ ಅದಮಾರುಶ್ರೀಯನ್ನು 5:42ಕ್ಕೆ ಗರ್ಭಗುಡಿಯೊಳಗೆ ಕರೆತಂದು ಮಠದ ಪಟ್ಟದ ದೇವರನ್ನು ಕೃಷ್ಣನ ಎದುರು ಇಟ್ಟು ಪೂಜೆಯ ಸಂಕೇತವಾದ ಅಕ್ಷಯ ಪಾತ್ರೆ, ಗರ್ಭಗುಡಿಯ ಕೀಲಿಕೈ ಹಾಗೂ ಸಟುಗವನ್ನು ಹಸ್ತಾಂತರಿಸಿದರು. ಈ ಬಾರಿ ಪಲಿಮಾರು ಮಠಾಧೀಶರು ಇವುಗಳನ್ನು ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರಿಗೆ ಹಸ್ತಾಂತರಿಸಿ ಬಳಿಕ ಇಬ್ಬರೂ ಸೇರಿ ಪರ್ಯಾಯ ಪೀಠವೇರುವ ಶ್ರೀಈಶಪ್ರಿಯ ತೀರ್ಥರಿಗೆ ಹಸ್ತಾಂತರಿಸಿದರು.

ಅನಂತರ 5:47ಕ್ಕೆ ಸರಿಯಾಗಿ ಉಳಿದೆಲ್ಲಾ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಪಲಿಮಾರು ಶ್ರೀ ಮೊದಲು ಅದಮಾರು ಹಿರಿಯಶ್ರೀಗಳನ್ನು ಸರ್ವಜ್ಞ (ಮಧ್ವ) ಪೀಠದಲ್ಲಿ ಕುಳ್ಳಿರಿಸಿದ್ದು, ಬಳಿಕ ಹಿರಿಯ ಯತಿಗಳು ತಾವೇ ಕೈ ಹಿಡಿದು ಶ್ರೀಈಶಪ್ರಿಯ ತೀರ್ಥರನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಶುಭಹಾರೈಸಿದರು. ಈ ಮೂಲಕ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣ ಮಠದ ಅಧಿಕಾರವನ್ನು ಶ್ರೀಈಶಪ್ರಿಯ ತೀರ್ಥರು ವಹಿಸಿಕೊಂಡರು. ಇಲ್ಲಿಗೆ ಪರ್ಯಾಯದ ಪ್ರಮುಖ ವಿಧಿಗಳು ಮುಕ್ತಾಯಗೊಂಡವು.

ಮುಂದಿನ ಧಾರ್ಮಿಕ ವಿಧಿಗಳು ಬಡಗು ಮಳಿಗೆಯಲ್ಲಿ ನಡೆದವು. ಬಡಗು ಮಳಿಗೆಯ ಅರಳುಗದ್ದಿಗೆಯಲ್ಲಿ ಉಪಸ್ಥಿತ ಮಠಾಧೀಶರುಗಳಿಗೆ ಮಾಲಿಕೆ ಮಂಗಳಾರತಿ ಮಾಡಿ ಗಂಧದುಪಚಾರ ಮಾಡಲಾಯಿತು. ಈ ಮೂಲಕ ಪೀಠಾರೋಹಣದ ಧಾರ್ಮಿಕ ವಿಧಿಗಳು ಮುಕ್ತಾಯಗೊಂಡವು. ಸಂಪ್ರದಾಯದಂತೆ ಇದರ ಬಳಿಕ ರಾಜಾಂಗಣದಲ್ಲಿ ಎಲ್ಲಾ ಮಠಾಧೀಶರ ಉಪಸ್ಥಿತಿಯಲ್ಲಿ ನಡೆಯಬೇಕಿದ್ದ ಪರ್ಯಾಯ ದರ್ಬಾರು ಈ ಬಾರಿ ಅಪರಾಹ್ನ 2:30ಕ್ಕೆ ನಡೆಯಲಿದೆ.

ಈ ಬಾರಿಯೂ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಹಾಗೂ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ್ಚಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಶಿರೂರು ಮಠದ ಉತ್ತರಾಧಿಕಾರಿಯ ನೇಮಕವಿನ್ನೂ ಆಗಿಲ್ಲ. ಹೀಗಾಗಿ ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠಾಧೀಶರೇ ಆ ಮಠವನ್ನು ಪ್ರತಿನಿಧಿಸಿದರು. ಶ್ರೀವಿಶ್ವಪ್ರಿಯ ತೀರ್ಥರು ಅಧಿಕಾರಿ ಹಸ್ತಾಂತರದ ವೇಳೆ ಮಠದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News