ಅಡ್ಯಾರ್-ಕಣ್ಣೂರು ಸಮಾವೇಶ ಅಭೂತಪೂರ್ವ ಯಶಸ್ಸು: ಮುಹಮ್ಮದ್ ಮಸೂದ್‌

Update: 2020-01-18 09:57 GMT

ಮಂಗಳೂರು, ಜ.18: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯು ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ನಗರದ ಅಡ್ಯಾರ್-ಕಣ್ಣೂರಿನ ಶಹಾ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದೆ. ಎಲ್ಲರ ನಿರೀಕ್ಷೆಗೂ ಮೀರಿ ಸೇರಿದ ಜನಸಮೂಹ ಜಿಲ್ಲೆಯ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್‌ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ವಿಗೆ ಪ್ರಾಮಾಣಿಕವಾಗಿ ಶ್ರಮಿಸಿದದ ಸ್ವಯಂಸೇವಕರು, ಸಮಾವೇಶದ ಸಂಘಟಕರು, ಸಹಭಾಗಿ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಅಭಿನಂದನೆಗೆ ಅರ್ಹರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.

ಲಕ್ಷಾಂತರ ಮಂದಿ ಸಮಾವೇಶಕ್ಕೆ ಸೇರಿದ್ದರಿಂದ ಸಾರ್ವಜನಿಕರಿಗೆ ಅಡಚಣೆಯಾಗಿರುವುದು ಸ್ವಾಭಾವಿಕ. ಈ ಅಡಚಣೆ ಸಹಿಸಿ, ಸಹಕರಿಸಿದ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸುತ್ತೇವೆ. ಪ್ಲಾಸ್ಟಿಕ್ ಬಾಟಲ್‌ಗಳು ರಸ್ತೆ ತುಂಬ ಬಿದ್ದಿದ್ದರಿಂದ ಮರುದಿನವೇ ರಸ್ತೆಯನ್ನು ಸ್ವಚ್ಛಗೊಳಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಸೈಯದ್ ಅಹ್ಮದ್ ಬಾಷಾ ತಂಙಳ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಸಮಾವೇಶ ಸಂಘಟನಾ ಸಮಿತಿಯ ಸಂಯೋಜಕರಾದ ಹಾಜಿ ಎಸ್.ಎಂ.ರಶೀದ್, ಖಾಸಿಮ್ ಅಹ್ಮದ್ ಎಚ್.ಕೆ., ಮನ್ಸೂರ್ ಅಹ್ಮದ್ ಅಝಾದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News