ಆಸ್ಪತ್ರೆಗೆ ನುಗ್ಗುವ ಪೊಲೀಸರು ರೌಡಿಗಳ ಕೆಲಸ ಮಾಡುತ್ತಿದ್ದಾರೆ : ಹೈಕೋರ್ಟ್ ನ್ಯಾಯವಾದಿ ಬಾಲನ್

Update: 2020-01-18 17:02 GMT

ಮಂಗಳೂರು : 'ನಗರದಲ್ಲಿ ಕಾನೂನು ಪ್ರಕಾರ ಆಡಳಿತ ನಡೆಸುತ್ತಿಲ್ಲ. ಸಂಘಪರಿವಾರದ ಆಡಳಿತ ಇರುವ ಶಂಕೆ ಇದೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ರೌಡಿ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ’ ಎಂದು ರಾಜ್ಯ ಹೈಕೋರ್ಟ್‌ನ ನ್ಯಾಯವಾದಿ ಬಾಲನ್ ಆರೋಪಿಸಿದ್ದಾರೆ.

ನಗರದ ಡಾನ್‌ಬೋಸ್ಕೋ ಮಿನಿ ಸಭಾಂಗಣದಲ್ಲಿ ಶನಿವಾರ ಪಿಯುಸಿಎಲ್‌ನಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರು ಪೊಲೀಸರು ಕೆಲವರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಕೊಂದಿದ್ದಲ್ಲದೆ, ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ರೌಡಿಗಳು ಮಾಡುವ ಕೆಲಸವನ್ನು ಖಾಕಿ ಬಟ್ಟೆ ಹಾಕಿಕೊಂಡು ಮಾಡಲಾಗುತ್ತಿರುವುದು ಅಕ್ಷಮ್ಯ. ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಕಾನೂನಿಗಿಂತ ದೊಡ್ಡವರೇ ?’ ಎಂದು ಪ್ರಶ್ನಿಸಿದರು.

‘ಮಂಗಳೂರು ಕರ್ನಾಟಕದ ಭಾಗವೋ, ಇಲ್ಲವೇ ಗುಜರಾತ್‌ನ ನಗರವೋ ತಿಳಿಯುತ್ತಿಲ್ಲ. ಗುಜರಾತ್‌ನಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದವು. ಮಂಗಳೂರಿನಲ್ಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಗುಜರಾತ್‌ನಲ್ಲಿ 14 ಐಪಿಎಸ್ ಅಧಿಕಾರಿಗಳು ನರೇಂದ್ರ ಮೋದಿಯ ಅಣತಿಯಂತೆ ಕಾರ್ಯನಿರ್ವಹಿಸಿ ಜೈಲುವಾಸ ಅನುಭವಿಸುತ್ತಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರಿಗೆ ಇದೇ ಪರಿಸ್ಥಿತಿ ಬರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಮಂಗಳೂರಲ್ಲಿ ಕೋಮುವಾದ, ಬ್ರಾಹ್ಮಣವಾದ, ಜಾತಿವಾದ, ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ. ಇಂತಹ ಕೆಳಮಟ್ಟಕ್ಕೆ ಪೊಲೀಸರು ಇಳಿದಿದ್ದಾರೆ ಎಂದರೆ ಇದು ನಾಚಿಕೆಗೇಡಿನ ವಿಚಾರ. ಇವರು ಪೊಲೀಸರಲ್ಲ; ರಾಕ್ಷಸರು. ಗುಂಡು ಹೊಡೆದರೂ ಒಬ್ಬರು ಸತ್ತಿಲ್ಲ ಎನ್ನುವ ಪೊಲೀಸ್ ಅಧಿಕಾರಿ ಇಲಾಖೆಗೆ ಅನರ್ಹ. ಇವರು ರಕ್ತ ಕುಡಿಯಲೆಂದೇ ಇಲಾಖೆಗೆ ನೇಮಕಗೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News