ಪರ್ಯಾಯ ವೈಭವದ ಮೆರವಣಿಗೆಯನ್ನು ಕಣ್ತುಂಬಿಕೊಂಡ ಭಕ್ತರು

Update: 2020-01-18 15:12 GMT

ಉಡುಪಿ, ಜ.18: ವಿಶಿಷ್ಟವಾಗಿ ಕಂಗೊಳಿಸುತ್ತಿದ್ದ ವಿದ್ಯುತ್ ದೀಪಾಲಂಕಾರ ಹಾಗೂ ಸ್ವಾಗತ ಕಮಾನು ಸಹಿತ ಆಕರ್ಷಣೀಯ ವಾಗಿ ಅಲಂಕೃತಗೊಂಡಿದ್ದ ಉಡುಪಿ ನಗರದ ಬೀದಿಯಲ್ಲಿ ಜ.18ರ ನಸುಕಿನ ವೇಳೆ ಸಾಗಿ ಬಂದ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿಯ ಪ್ರಥಮ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಯನ್ನು ಸಹಸ್ರಾರು ಸಂಖ್ಯೆ ಭಕ್ತಾಧಿಗಳು ಕಣ್ತುಂಬಿಕೊಂಡರು.

ನಗರದ ಜೋಡುಕಟ್ಟೆಯಿಂದ ನಸುಕಿನ ವೇಳೆ 2:30ರ ಸುಮಾರಿಗೆ ಆರಂಭ ಗೊಂಡ ಮೆರವಣಿಗೆ ಅದಮಾರು ಮಠದ ಪಟ್ಟದ ದೇವರು, ಮಠಾಧೀಶರು, ವಿದ್ವಾಂಸರು, ನಾಡಿನ ಗಣ್ಯರು ಹಾಗೂ ಸಹಸ್ರಾರು ಭಕ್ತಾದಿಗಳೊಂದಿಗೆ ವೇದಘೋಷ ಪೂರ್ವಕವಾಗಿ ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಐಡಿ ಯಲ್ ಸರ್ಕಲ್, ತೆಂಕಪೇಟೆ ಮಾರ್ಗದ ಮೂಲಕ ಸಾಗಿ ಮುಂಜಾನೆ 4:30ಕ್ಕೆ ಶ್ರೀಕೃಷ್ಣ ಮಠದ ರಥಬೀದಿ ತಲುಪಿತು. ಮುಂಜಾನೆ 5:30ರ ಸುಮಾರಿಗೆ ಮೆರವಣಿಗೆಯು ಮುಕ್ತಾಯಗೊಂಡಿತು.

ಗಮನ ಸೆಳೆದ ಟ್ಯಾಬ್ಲೋ: ಮೆರವಣಿಗೆಯಲ್ಲಿ ಸುಮಾರು 14 ಟ್ಯಾಬ್ಲೋ ಗಳು ಮತ್ತು 20ಕ್ಕೂ ಹೆಚ್ಚು ವರ್ಣಮಯ ಜಾನಪದ ಹಾಗೂ ಕಲಾತಂಡಗಳು, ವೈವಿದ್ಯಮಯ ಡೋಲು ಹಾಗೂ ವಾದ್ಯಗಳು ಅತ್ಯಾಕರ್ಷಕವಾಗಿದ್ದವು.

ಅದಮಾರು ಮಠದ ಪಟ್ಟದ ದೇವರಾದ ಕಾಳೀಯಮರ್ದನ ಶ್ರೀಕೃಷ್ಣ ದೇವರು, ಶ್ರೀಕೃಷ್ಣ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಕೀರ್ತಿಶೇಷ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮತ್ತು ರಾಮಮಂದಿರ, ಬೆಳ್ಳಿರಥದಲ್ಲಿ ಶ್ರೀಕೃಷ್ಣ, ಆಂಜನೇಯ, ನವದುರ್ಗೆಯರು, ಕುಂಜಾರುಗಿರಿ ಬೆಟ್ಟ, ದೇಶೀಯ ಗೋವಿನ ತಳಿ, ಹಳ್ಳಿ ಜೀವನ, ತುಳುನಾಡ ಸಂಸ್ಕೃತಿ, ಪ್ಲಾಸ್ಟಿಕ್‌ ಭೂತ, ಇಸ್ರೋ ವೀಕ್ಷಣೆ, ನಾಡದೋಣಿ ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಿದವು.

ಅದೇ ರೀತಿ ಉಡುಪಿ ನಗರಸಭೆಯ ಸ್ವಚ್ಛ ಭಾರತ, ಕೃಷಿ ಇಲಾಖೆಯ ಕೃಷಿಯ ಸೊಬಗು, ಪ್ರವಾಸೋದ್ಯಮ ಇಲಾಖೆಯ ತುಳುನಾಡ ಸೃಷ್ಟಿ ಹಾಗೂ ಜಿಲ್ಲಾ ಪಂಚಾಯತ್‌ನ ವಿಶೇಷ ಭಜನಾ ತಂಡಗಳ ಟ್ಯಾಬ್ಲೊೀಗಳು ಕೂಡ ಗಮನ ಸೆಳೆದವು.
ಕಲಾಪ್ರಕಾರಗಳ ವೈಭವ: ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ತಂಡಗಳು ಕಣ್ಮನ ಸೆಳೆದವು. ಅಲ್ಲದೆ ಚೆಂಡೆಯ ನಾದ ಸೇರಿದಂತೆ ಇತರ ಕಲಾ ಪ್ರಕಾರಗಳು ಮೆರವಣಿಗೆಯ ಅಂದ ಹೆಚ್ಚಿಸಿದವು.

ಮೈಸೂರಿನ ಡೊಳ್ಳು ಕುಣಿತ, ಕಂಸಾಳೆ, ಮಂಡ್ಯದ ವೀರಗಾಸೆ, ರಾಮನಗರದ ಪೂಜಾ ಕುಣಿತ, ಚಿತ್ರದುರ್ಗದ ಗಾರುಡಿಗೊಂಬೆ ಕುಣಿತ, ಗೊರವರ ಕುಣಿತ, ದಾವಣಗೆರೆಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ವಾದ್ಯ, ಮಂದಾರ್ತಿಯ ಗಮಟೆ ನೃತ್ಯ, ಕಂಗೀಲು ನೃತ್ಯ, ಕೊರಗರ ಡೋಲು ವಾದ್ಯ ಮತ್ತು ಕೊಳಲು ವಾದನ ಸಾಂಸ್ಕೃತಿಕ ಮೆರುಗು ನೀಡಿತು.

ಇತರ ಕಲಾ ಪ್ರಕಾರಗಳಾದ ಪೂರ್ಣಕುಂಭ, ಬಿರುದಾವಳಿ, ಗೊಂಬೆ ತಂಡಗಳು, ಚಂಡೆ ಬಳಗ, ಪಂಚವಾದ್ಯ, ಕೊಂಬು ವಾದನ, ನಾಗಸ್ವಾರ ತಂಡ, ಚೆಂಡೆ ಮತ್ತು ಕೋಲಾಟ, ತಮಟೆ ಮತ್ತು ನಗಾರಿ, ತಾಲೀಮು, ಭಾರತ ಸೇವಾದಲ, ರೇಂಜರ್ಸ್‌ ಆ್ಯಂಡ್ ರೋವರ್ಸ್‌, ಭಜನಾ ತಂಡಗಳು, ಹರೇ ರಾಮ ಹರೇ ಕೃಷ್ಣ, ಬಣ್ಣದ ಕೊಡೆಗಳು, ಕುದುರೆ, ಒಂಟೆಗಳು ಗಮನ ಸೆಳೆದವು.
 ಮೆರವಣಿಗೆಯಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಶಾಸಕ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದ ಗಣ್ಯರು ಸಾಗಿ ಬಂದರು. ಪರ್ಯಾಯ ಮಹೋತ್ಸವ ಹಾಗೂ ಮೆರವಣಿಗೆ ಹಿನ್ನೆಲೆಯಲ್ಲಿ ನಗರಾದ್ಯಂತ ಸಾವಿರಾರು ಮಂದಿ ಪೊಲೀಸರನ್ನು ಭದ್ರತೆ ಗಾಗಿ ನಿಯೋಜಿಸ ಲಾಗಿತ್ತು.

ಸ್ವಾಮೀಜಿಗಳ ಸರದಿಯಲ್ಲಿ ಬದಲಾವಣೆ !

ಸಾಮಾನ್ಯವಾಗಿ ಪರ್ಯಾಯ ಮೆರವಣಿಗೆಯಲ್ಲಿ ಕಲಾಪ್ರಕಾರ, ತಂಡಗಳು, ಟ್ಯಾಬ್ಲೋಗಳು ಮೊದಲು, ಸ್ವಾಮೀಜಿಗಳು ಕೊನೆಯಲ್ಲಿ ಸಾಗಿ ಬರುತ್ತಿದ್ದರು. ಆದರೆ ಈ ಬಾರಿಯ ಮೆರವಣಿಗೆಯಲ್ಲಿ ಅದನ್ನು ಬದಲಾವಣೆ ಮಾಡಿರುವುದು ಕಂಡುಬಂತು.

ಮೊದಲು ವಿವಿಧ ಕಲಾಪ್ರಕಾರಗಳು, ಕಲಾ ತಂಡಗಳು ಸಾಗಿಬಂದರೆ ನಂತರ, ಸ್ವಾಮೀಜಿಗಳನ್ನು ಪಲ್ಲಕಿಯಲ್ಲಿ ಕರೆತರಲಾಯಿತು. ಕೊನೆಯಲ್ಲಿ ಟ್ಯಾಬ್ಲೋಗಳು ಮತ್ತು ಇತರ ಕಲಾತಂಡಗಳು ಸಾಗಿಬಂದಿರುವುದು ವಿಶೇಷವಾಗಿತ್ತು.

ಮಾನವ ಪಲ್ಲಕ್ಕಿಯಲ್ಲಿ ಬಂದ ಅದಮಾರು ಶ್ರೀ!

ಮೆರವಣಿಗೆಯ ಮೊದಲಾಗಿ ಪರ್ಯಾಯ ಪೀಠವನ್ನೇರಿದ ಅದಮಾರು ಮಠದ ಪಟ್ಟದ ದೇವರು ಕಾಳಿಂಗ ಮರ್ದನ ಕೃಷ್ಣ, ನಂತರ ಅದಮಾರು ಶ್ರೀಈಶ ಪ್ರಿಯ ತೀರ್ಥರು, ನಂತರ ಕೃಷಾಪುರ ಶ್ರೀವಿದ್ಯಾಸಾಗರ ತೀರ್ಥ, ಪೇಜಾವರ ಶ್ರಿವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅವರ ಹಿಂದೆ ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಹಾಗೂ ಕೊನೆಯಲ್ಲಿ ಸೋದೆ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸಾಗಿ ಬಂದರು.

ಅದಮಾರು ಸ್ವಾಮೀಜಿ ಹೊರತು ಪಡಿಸಿ ಉಳಿದ ಎಲ್ಲ ಸ್ವಾಮೀಜಿಗಳು ವಾಹನದಲ್ಲಿ ಇರಿಸಿದ್ದ ಪಲ್ಲಕಿಯಲ್ಲಿ ಕುಳಿತುಕೊಂಡು ಮೆರವಣಿಗೆಯಲ್ಲಿ ಬಂದರು. ಪರ್ಯಾಯ ಅದಮಾರು ಸ್ವಾಮೀಜಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭಕ್ತಾಧಿಗಳು ಹೊತ್ತುಕೊಂಡು ಬಂದರು. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅದಮಾರು ಹಿರಿಯ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮೆರವಣಿಗೆಯಲ್ಲಿ ಗೈರು ಹಾಜರಾಗಿದ್ದರು. ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥ ಶ್ರೀಪಾದರು ನಿಧನರಾಗಿರುವುದರಿಂದ ಅವರ ಉತ್ತರಾಧಿಕಾರಿಯನ್ನು ಇನ್ನೂ ಹೆಸರಿಸದೇ ಇರುವುದರಿಂದ ಶಿರೂರು ಮಠವನ್ನು ಅದರ ದ್ವಂದ್ವ ಮಠವಾದ ಸೋದೆ ಮಠಾಧೀಶರೇ ಪ್ರತಿನಿಧಿಸಿದರು.

ಪೌರ ಕಾರ್ಮಿಕರಿಂದ ಉಡುಪಿ ನಗರ ಸ್ವಚ್ಛ!

ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದ ಪರ್ಯಾಯ ಮಹೋತ್ಸವದ ಮೆರವಣಿಗೆ ಮುಗಿಯುತ್ತಿದ್ದಂತೆ ಉಡುಪಿ ನಗರ ಸಭೆಯ ಪೌರ ಕಾರ್ಮಿಕರು ರಸ್ತೆಗಿಳಿದು ಕೆಲವೇ ಗಂಟೆಯೊಳಗೆ ಇಡೀ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ನಗರದ ಜೋಡುಕಟ್ಟೆ- ಡಯಾನ ಸರ್ಕಲ್- ಕೆ.ಎಂ.ಮಾರ್ಗ- ಕನಕದಾನ ರಸ್ತೆ ಮಾರ್ಗದಲ್ಲಿ ಪರ್ಯಾಯ ಮೆರವಣಿಗೆ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಅದೇ ರೀತಿ ನಗರದ ವಿವಿಧೆಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಹೀಗೆ ನಗರದಲ್ಲಿ ಸೇರಿದ ಜನ ಜಾತ್ರೆಯಿಂದ ಎಲ್ಲೆಡೆ ಕಸಗಳು ತುಂಬಿ ಹೋಗಿದ್ದವು.

ಮೆರವಣಿಗೆ ಸಾಗಿ ಬರುತ್ತಿದ್ದಂತೆ ಕೊನೆಯಲ್ಲಿ ಪೊರಕೆ ಹಿಡಿದುಕೊಂಡು ರಸ್ತೆಗಿಳಿದ ಒಟ್ಟು 80 ಮಂದಿ ಪೌರ ಕಾರ್ಮಿಕರ ಎರಡು ತಂಡ ರಸ್ತೆಯುದ್ದಕ್ಕೂ ಬಿದ್ದ ಕಸವನ್ನು ಶುಚಿಗೊಳಿಸುವ ಕಾರ್ಯ ನಡೆಸಿದರು. ಅಲ್ಲದೆ ಕ್ಷಣಾರ್ಧದಲ್ಲಿ ಇಡೀ ನಗರವನ್ನೇ ಈ ತಂಡ ಸ್ವಚ್ಛಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News