ಪರ್ಯಾಯ ಯಶಸ್ವಿಗೆ ಎಲ್ಲರೂ ಕೈಜೋಡಿಸಿ: ಶ್ರೀಈಶಪ್ರಿಯ ತೀರ್ಥ

Update: 2020-01-18 16:32 GMT

ಉಡುಪಿ, ಜ.18: ಎರಡು ವರ್ಷಗಳ ತಮ್ಮ ಪರ್ಯಾಯ ಅವಧಿಯ ಎಲ್ಲಾ ಪ್ರಯತ್ನಗಳು ಸಾಕಾರಗೊಳ್ಳಲು ಎಲ್ಲರ ಪ್ರಾರ್ಥನೆ ಹಾಗೂ ಬೆಂಬಲ ಬೇಕಾಗಿದೆ. ನಾಡು ಸುಭಿಕ್ಷೆಗೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಇಂದು ಮುಂಜಾನೆ ಪಲಿಮಾರು ಮಠದ ಶ್ರೀವಿದ್ಯಾಮಾನ್ಯತೀರ್ಥರಿಂದ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಅಧಿಕಾರವನ್ನು ಸ್ವೀಕರಿಸಿದ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ತಿಳಿಸಿದ್ದಾರೆ.

ಶ್ರೀಕೃಷ್ಣಮಠದ ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ ಇಂದು ಅಪರಾಹ್ನ ನಡೆದ ಪರ್ಯಾಯ ಅಧಿಕಾರ ಹಸ್ತಾಂತರದ ಬಳಿಕ ನಡೆಯುವ ಪರ್ಯಾಯ ಗದ್ದುಗೆ ಹಾಗೂ ದರ್ಬಾರು ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಇಲ್ಲಿ ನಾವು ನಿಮಿತ್ತ ಮಾತ್ರ. ಎಲ್ಲವನ್ನೂ ಮುನ್ನಡೆಸುವವರು ಆನಂದ ತೀರ್ಥರು. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಯಾವುದೇ ಆರಾಧನೆಗಳು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದೊಯ್ಯಬೇಕು. ಕೃಷ್ಣನ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, ಚಿಕ್ಕಂದಿನಿಂದಲೂ ಉಡುಪಿಯ ಈ ಮಟ್ಟದ ಪ್ರಭಾವ ತಮ್ಮ ಮೇಲೆ ಅಚ್ಚರಿಯಂತೆ ಕಾಣಿಸಿಕೊಳ್ಳುತ್ತಿದೆ. ಇಲ್ಲಿಗೆ ನಾನು ಹಲವು ಬಾರಿ ಬಂದು ಕೃಷ್ಣನ ದರ್ಶನ ಮಾಡಿದ್ದೇನೆ. ಕಳೆದ 20-25ವರ್ಷಗಳಿಂದ ಹೆಚ್ಚೆಚ್ಚಾಗಿ ಉಡುಪಿಯತ್ತ ಆಕರ್ಷಿತಳಾಗಿದ್ದೇನೆ ಎಂದರು.

16 ವರ್ಷಗಳ ಹಿಂದೆ ಅದಮಾರು ಮಠದ ಪರ್ಯಾಯ ನಡೆದಿದ್ದಾಗ (ಶ್ರೀವಿಶ್ವಪ್ರಿಯ ತೀರ್ಥರು) ನಾನು ಉಡುಪಿಗೆ ಬಂದು ಅವರ ಆಶೀರ್ವಾದ ಪಡೆದಿದ್ದೆ. ಕಳೆದ ಸೆಫ್ಟೆಂಬರ್ ತಿಂಗಳಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೊಸದಿಲ್ಲಿಯ ನನ್ನ ಮನೆಗೆ ಬಂದು ಹರಸಿದ್ದರು. ಇದೊಂದು ಮರೆಯಲಾಗದ ಅನುಭವ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಅಧಿಕಾರ ಹಸ್ತಾಂತರದ ಪರ್ಯಾಯ ಪದ್ಧತಿಯ ಮೂಲಕ ಆಧ್ಯಾತ್ಮಿಕ ಸಂವಿಧಾನವನ್ನು ಈ ಜಗತ್ತಿಗೆ ನೀಡಿದವರು ಶ್ರೀಮಧ್ವಾಚಾರ್ಯರು, ಅಂದಿಗೂ, ಇಂದಿಗೂ ದೊಡ್ಡ ವಿಜ್ಞಾನಿಯಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ಪರ್ಯಾಯ ಪೀಠವೇರಿದ ಶ್ರೀಈಶಪ್ರಿಯ ತೀರ್ಥರನ್ನು ಅಭಿನಂದಿಸಿದರಲ್ಲದೇ, ಅದಮಾರು ಮಠಕ್ಕೂ, ತಮ್ಮ ಕುಟುಂಬಕ್ಕೂ ಮೊದಲಿನಿಂದಲೂ ಇದ್ದ ಉತ್ತಮ ಸಂಬಂಧವನ್ನು ಸ್ಮರಿಸಿಕೊಂಡರು.

 ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ, ಸ್ವಾಮೀಜಿಯವರ ವಿಶೇಷ ಕೋರಿಕೆಯಂತೆ ಬೆಂಗಳೂರಿನಲ್ಲಿರುವ ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಬ್ಯಾಂಕಿನ ವತಿಯಿಂದ ಸೌರ ವಿದ್ಯುತ್‌ನ ಸೌಲಭ್ಯ ಅಳವಡಿಸಲು 25 ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿದರು.

ನಿರ್ಗಮನ ಪರ್ಯಾಯ ಪೀಠಾಧಿಪತಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಗದೀಶ್, ಸಿಇಓ ಪ್ರೀತಿ ಗೆಹ್ಲೋಟ್, ಹೈಕೋರ್ಟ್‌ನ ನ್ಯಾಯಾಧೀಶ ಟಿ.ಎಸ್.ದಿನೇಶ್ ಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು, ವಿದ್ವಾಂಸರನ್ನು ಗೌರವಿಸಲಾಯಿತು. ಓಂಪ್ರಕಾಶ್ ಭಟ್ ಅವರ ‘ಜ್ಞಾನಯಜ್ಞ’ ಕೃತಿಯನ್ನು ಪರ್ಯಾಯ ಅದಮಾರುಶ್ರೀಗಳು ಬಿಡುಗಡೆಗೊಳಿಸಿದರು.

ಶ್ರೀಕೃಷ್ಣ ಸೇವಾ ಬಳಗದ ಗೌರವಾದ್ಯಕ್ಷ ಶಾಸಕ ಕೆ.ರಘುಪತಿ ಭಟ್ ಅತಿಥಿಗಳನ್ನು ಸ್ವಾಗತಿಸಿದರೆ, ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ವಂದಿಸಿದರು. ಬೆ.ನಾ.ವಿಜಯೇಂದ್ರ ಆಚಾರ್ಯ ಹಾಗೂ ಕೃಷ್ಣರಾಜ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News