ಬಲಿಪ ನಾರಾಯಣ ಭಾಗವತರಿಗೆ ‘ಶ್ರೀನರಹರಿತೀರ್ಥ ಪ್ರಶಸ್ತಿ’

Update: 2020-01-18 16:34 GMT

ಉಡುಪಿ, ಜ.18: ಇಂದು ಪರ್ಯಾಯ ಪೀಠಾರೋಹಣ ಮಾಡಿದ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ಸಾಧಕರು, ವಿದ್ವಾಂಸರು ಹಾಗೂ ವೃತ್ತಿಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಅದಮಾರು ಮಠದ ವತಿಯಿಂದ ಮಠದ ಮೂಲ ಯತಿಗಳಾದ ಶ್ರೀನರಹರಿ ತೀರ್ಥರ ಹೆಸರಿನಲ್ಲಿ ಯಕ್ಷಗಾನ ರಂಗದ ಶ್ರೇಷ್ಠ ಸಾಧಕರೊಬ್ಬರಿಗೆ ‘ಶ್ರೀನರಹರಿ ತೀರ್ಥ ಪ್ರಶಸ್ತಿ’ಯನ್ನು ಶ್ರೀಈಶಪ್ರಿಯ ತೀರ್ಥರು ಘೋಷಿಸಿದ್ದು, ಮೊದಲ ಪ್ರಶಸ್ತಿಯನ್ನು ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಕಟೀಲು ಮೇಳದ ಬಲಿಪ ನಾರಾಯಣ ಭಾಗವತ್‌ರಿಗೆ ನೀಡಿ ಸನ್ಮಾನಿಸಲಾಯಿತು.

ಶ್ರೀಈಶಪ್ರಿಯ ತೀರ್ಥರು, ಬಲಿಪ ನಾರಾಯಣ ಭಾಗವತರನ್ನು ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ, ಫಲಕ ಹಾಗೂ 50,000ರೂ.ನಗದು ನೀಡಿ ಗೌರವಿಸಿದರು.

ಇವರೊಂದಿಗೆ ವಿದ್ವಾಂಸರಾದ ಸಾಲಿಗ್ರಾಮದ ವಿದ್ವಾನ್ ಶ್ರೀನಿವಾಸ ಅಡಿಗ, ಬೆಂಗಳೂರಿನ ಡಾ.ವಿದ್ವಾನ್ ಸತ್ಯನಾರಾಯಣ ಆಚಾರ್ಯರನ್ನು ಸಹ ಸನ್ಮಾನಿಸಲಾಯಿತು. ಅಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲಿ ಬೆಂಗಳೂರಿನ ವಿಜ್ಞಾನಿ ಡಾ.ಕೆ.ಶ್ರೀಹರಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಮೈಸೂರು ರಾಮಚಂದ್ರ ಆಚಾರ್ಯ, ಯಕ್ಷಗಾನ ಕ್ಷೇತ್ರದಲ್ಲಿ ಶತಾಯುಷಿ ಹಿರಿಯಡಕ ಗೋಪಾಲ ರಾವ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಿ.ಎಸ್.ಚಂದ್ರಶೇಖರ್‌ರನ್ನು ಸನ್ಮಾನಿಸಲಾಯಿತು.

ಅಲ್ಲದೇ ನಾಗಾಲ್ಯಾಂಡ್‌ನ ನಿವೃತ್ತ ರಾಜ್ಯಪಾಲರಾದ ಪಿ.ಬಿ.ಆಚಾರ್ಯ, ಸೂರಾಲಿನ ಎಸ್.ಕೃಷ್ಣಮೂರ್ತಿ ಭಟ್, ಚೆನ್ನೈನ ರಾಮಪ್ರಸಾದ್ ಭಟ್, ಬೆಂಗಳೂರಿನ ಗುಂಡ್ಮಿ ವೆಂಕಟರಮಣ ಸೋಮಯಾಜಿ, ಬೆಂಗಳೂರಿನ ವಿಜಯಕುಮಾರ್, ಹೈದರಾಬಾದ್‌ನ ಬಿ.ಪಿ.ರಾಘವೇಂದ್ರರನ್ನು ‘ಕೃಷ್ಣಾನುಗ್ರಹ ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಳು ಭಾಷಾ ಸೇವೆಗಾಗಿ ತುಳು ವಿದ್ವಾಂಸ ಡಾ.ಯು.ಪಿ.ಉಪಾಧ್ಯ,, ಉಡುಪಿ ಅಡುಗೆಗಾಗಿ ಉದ್ಯಾವರದ ದಿ.ವೆಂಕಟರಮಣ ಭಟ್, ಕುಂಜಾರುಗಿರಿ ದೇವಸ್ಥಾನದಲ್ಲಿ 75 ವರ್ಷಗಳ ಕಾಲ ನಗಾರಿ ಸೇವೆ ಮಾಡಿದ ದಾಸ ಶೇರಿಗಾರ್, ಪೌರ ಕಾರ್ಮಿಕ ಸುಬ್ಬ, ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಕ ರಾಮಚಂದ್ರ ಭಟ್ ಶಾನಾಡಿ ಹಾಗೂ ಸಮಾಜ ಸೇವೆಯಲ್ಲಿ ಕೇಶವರಾಯ ಪ್ರಭು ಇವರನ್ನು ಪರ್ಯಾಯ ಅದಮಾರುಶ್ರೀಗಳು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News