ನೇತ್ರಾವತಿ ಸೇತುವೆಗೆ ಸಿಸಿ ಕ್ಯಾಮರಾ ಅಳವಡಿಕೆ: ಶಾಸಕ ಕಾಮತ್

Update: 2020-01-18 16:51 GMT

ಮಂಗಳೂರು, ಜ.18: ನೇತ್ರಾವತಿಯ ಎರಡೂ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆ ಅಳವಡಿಕೆಗೆ ಕ್ರಿಯಾ ಯೋಜನೆ ಹಾಗೂ ಸೇತುವೆಯ ಎರಡೂ ಬದಿಗಳಲ್ಲಿ ತಕ್ಷಣವೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಸಿ ಕ್ಯಾಮರಾ ಅಳವಡಿಸಲಾ ಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಕಾಮತ್ ಮಂಗಳೂರು-ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೇತ್ರಾವತಿ ಸೇತುವೆಯಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳನ್ನು ತಡೆಯವ ನಿಟ್ಟಿನಲ್ಲಿ ಸೇತುವೆಯ ಎರಡು ಕಡೆಗಳಲ್ಲಿ ಸುರಕ್ಷತಾ ತಡೆಗೋಡೆ ಅಳವಡಿಸುವ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಿ ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಅನುಮೋದನೆ ನೀಡುವ ಕುರಿತು ನಿರ್ಧರಿಸಲಾಗಿದೆ. ಅಲ್ಲದೆ ತಕ್ಷಣವೇ ಇಕ್ಕೆಲಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದರು.

ವೆಲೆನ್ಸಿಯಾ ಜಂಕ್ಷನ್‌ನಲ್ಲಿರುವ ಪಾರ್ಕನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ತಕ್ಷಣ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುವಂತೆ ಪಾರ್ಕ್ ಅಭಿವೃದ್ಧಿಗೊಳಿಸಲಾಗುವುದು ಎಂದು ಕಾಮತ್ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್, ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News