ಮಂಗಳಜ್ಯೋತಿ: ವಿಶೇಷ ಸಾಮರ್ಥ್ಯದ ಮಕ್ಕಳ ಕಲೋತ್ಸವ ಕಾರ್ಯಕ್ರಮ

Update: 2020-01-18 16:52 GMT

ವಾಮಂಜೂರು, ಜ.18: ಇಲ್ಲಿನ ಮಂಗಳಜ್ಯೋತಿ ಎಸ್‌ಡಿಎಂ ಸಮಗ್ರ ಶಾಲೆಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ 13ನೇ ವರ್ಷದ ದಿ.ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ ದಕ ಮತ್ತು ಉಡುಪಿ ಜಿಲ್ಲಾ ಮಟ್ಟದ ‘ಕಲೋತ್ಸವ-2019-2020’ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವು ಶನಿವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೊರೇಶನ್ ಬ್ಯಾಂಕ್ ಮಂಗಳೂರು ಇದರ ಎಜಿಎಂ ಡಾ. ಪ್ರಕಾಶ್ ಮಾತನಾಡಿ, ಸಂಸ್ಥೆಯ ಮಕ್ಕಳು ಚಿತ್ರಿಸಿರುವ ಕಲಾಕೃತಿಗಳು ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಈ ಮೂಲಕ ವಿಶೇಷ ಸಾಮರ್ಥ್ಯದ ಮಕ್ಕಳ ಬುದ್ಧಿಮತ್ತೆ ಅನಾವರಣಗೊಂಡಿದೆ. ಕಾರ್ಪೊರೇಶನ್ ಬ್ಯಾಂಕ್ ಉದ್ಯೋಗಿಗಳು ಸದಾ ಈ ಸಂಸ್ಥೆಯೊಂದಿಗಿದ್ದಾರೆ ಎಂದರು.

ಕೋಶಾಧಿಕಾರಿ ಕೆ ದೇವರಾಜ್ ಮಾತನಾಡಿ ಇಲ್ಲಿನ ಸಿಬ್ಬಂದಿಗೆ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಸಾಮರ್ಥ್ಯದ ಮಕ್ಕಳ ಸೇವೆ ಮಾಡುವ ಭಾಗ್ಯವಿದ್ದು, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲಿನ ಮಕ್ಕಳ ಮೇಲೆ ಆಡಳಿತ ವರ್ಗ, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಯ ಪ್ರೀತಿ ಮತ್ತು ಸಹನೆ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಕರಾವಳಿ ಫಿಟ್ನೆಸ್ ಸಂಸ್ಥೆಯ ಮುಖ್ಯಸ್ಥ ಅನೂಪ್ ನಾರಾಯಣ ಭಟ್ ಮಾತನಾಡಿ, ವಿಶೇಷ ಸಾಮರ್ಥ್ಯದ ಮಕ್ಕಳಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ. ಒಂದು ಸಾಹಸದ ಕೆಲಸ ಮಾಡುವುದಕ್ಕಿಂತ ಮುಂಚೆ ನಾವು ಹಲವು ಬಾರಿ ಯೋಚಿಸುತ್ತೇವೆಯಾದರೂ, ವಿಶೇಷ ಸಾಮರ್ಥ್ಯದ ಮಕ್ಕಳು ಧೈರ್ಯ ಮತ್ತು ಮುಗ್ಧತೆಯಿಂದ ತಕ್ಷಣ ಕೆಲಸ ಮಾಡಲು ಮುಂದಾಗುತ್ತಾರೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಪ್ರೊ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಎಂ ಐಟಿಐ ಪ್ರಾಂಶುಪಾಲ ನರೇಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ, ಪ್ರಾಥಮಿಕ ಶಾಲಾ ಶಿಕ್ಷಕಿ ರೇಣುಕಾ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ಸ್ವಾಗತಿಸಿದರು. ಶಿಕ್ಷಕರಾದ ಗಂಗಾಧರ ಗೌಡ ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ್ ವಂದಿಸಿದರು.

ಈ ಸಂದರ್ಭ ಸಂಸ್ಥೆಯ ವಿದ್ಯಾರ್ಥಿಗಳು ಚಿತ್ರಿಸಿದ ವಿಭಿನ್ನ ಕಲಾಕೃತಿಗಳ ಪ್ರದರ್ಶನ ನಡೆಯಿತು. ದಕ ಮತ್ತು ಉಡುಪಿ ಜಿಲ್ಲೆಯ 9 ಶಾಲೆಗಳ 110 ವಿದ್ಯಾರ್ಥಿಗಳು ‘ಕಲೋತ್ಸವ’ಲ್ಲಿ ಭಾಗವಹಿಸಿದ್ದರು. ಕಲೋತ್ಸವ ಸ್ಪರ್ಧಾಳುಗಳಿಗೆ ಸಾಮಾಜಿಕ ಕಾರ್ಯಕರ್ತ ಎಪಿ ಭಟ್ ವಿಶೇಷ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News