ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯ ಹಣಾಹಣಿ

Update: 2020-01-18 17:43 GMT

ಬೆಂಗಳೂರು, ಜ.18: ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಠ ತಂಡಗಳಾಗಿರುವ ಭಾರತ ಹಾಗೂ ಆಸ್ಟ್ರೇಲಿಯ ರವಿವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟ್ರೋಫಿ ವಶಪಡಿಸಿಕೊಳ್ಳಲು ಹೋರಾಟ ನಡೆಸಲಿವೆ.

 ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಪಂದ್ಯದಲ್ಲಿ ಜಯ ಸಾಧಿಸಿರುವ ಉಭಯ ತಂಡಗಳು ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿವೆ. ಆಸ್ಟ್ರೇಲಿಯ ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸುಲಭವಾಗಿ ಜಯಿಸಿತ್ತು. ರಾಜ್‌ಕೋಟ್‌ನಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿ ಸರಣಿ ಗೆಲ್ಲುವ ವಿಶ್ವಾಸದಲ್ಲಿತ್ತು.

ಆದರೆ, ಎರಡನೇ ಪಂದ್ಯವನ್ನು 36 ರನ್ ಅಂತರದಿಂದ ಗೆದ್ದುಕೊಂಡ ಭಾರತ ಸ್ವದೇಶದಲ್ಲಿ ಆಸೀಸ್ ವಿರುದ್ಧ ಸತತ 4 ಪಂದ್ಯಗಳ ಸೋಲಿನಿಂದ ಹೊರ ಬಂದಿರುವುದಲ್ಲದೆ, ಸರಣಿ ಸಮಬಲಗೊಳಿಸಿದೆ. ರಾಜ್‌ಕೋಟ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿತ್ತು. ಕೆ.ಎಲ್. ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೂ ಆಕರ್ಷಕ 80 ರನ್ ಗಳಿಸಿ ಭಾರತ 340 ರನ್ ಕಲೆ ಹಾಕಲು ನೆರವಾಗಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ದ ವಿಶಾಖಪಟ್ಟಣದಲ್ಲಿ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ 104 ಎಸೆತಗಳಲ್ಲಿ 102 ರನ್ ಗಳಿಸಿದ್ದರು. ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಕೂಡ ಬಲಿಷ್ಠ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಭಾರತ ಗೆಲ್ಲುವಂತೆ ಮಾಡಿದ್ದರು.

ಈ ಹಿಂದಿನ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ಇದೀಗ ತನ್ನ ಹೊಸ ಕ್ರಮಾಂಕದಲ್ಲಿ 150ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿ ಹೊಸ ಭರವಸೆ ಮೂಡಿಸಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. 2ನೇ ಪಂದ್ಯದಲ್ಲಿ ಆ್ಯರೊನ್ ಫಿಂಚ್‌ರನ್ನು ಸ್ಟಂಪ್ ಔಟ್ ಮಾಡಿದ್ದಲ್ಲದೆ, ಎರಡು ಕ್ಯಾಚ್‌ಗಳನ್ನು ಪಡೆದಿದ್ದರು.

ಧವನ್ ಫಿಟ್, ರೋಹಿತ್ ಡೌಟ್

 2ನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದ ಶಿಖರ್ ಧವನ್ 3ನೇ ಪಂದ್ಯಕ್ಕೆ ಫಿಟ್ ಇದ್ದಾರೆ. ಆದರೆ, ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆ ಸಂಶಯವಿದೆ. ಉಪ ನಾಯಕ ರೋಹಿತ್‌ಗೆ ಭುಜನೋವು ಕಾಡುತ್ತಿದೆ. ಇಬ್ಬರೂ ಆರಂಭಿಕ ಆಟಗಾರರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಪಂದ್ಯದ ದಿನ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ. ನಾಯಕ ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಆಡಲಿದ್ದು, ರವಿವಾರದ ಪಂದ್ಯದಲ್ಲೂ ಇದೇ ಕ್ರಮಾಂಕದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. 2ನೇ ಪಂದ್ಯದಲ್ಲಿ ಮನೀಷ್ ಪಾಂಡೆ ಅವರು ಗಾಯಗೊಂಡಿರುವ ರಿಷಭ್ ಪಂತ್ ಬದಲಿಗೆ ಆಡಿದ್ದರು. ಪಂತ್ ಗಾಯದಿಂದ ಚೇತರಿಸಿಕೊಂಡಿದ್ದಾರೆಯೇ?, 3ನೇ ಪಂದ್ಯಕ್ಕೆ ಲಭ್ಯವಿರುತ್ತಾರೆಯೇ? ಎನ್ನುವುದು ಇನ್ನೂ ಖಚಿತವಾಗಿಲ್ಲ. ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ತಂಡ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳಿಗೆ ಆದ್ಯತೆ ನೀಡಲಿದೆ. 2019ರಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಕುಲದೀಪ್ ಯಾದವ್ ರಾಜ್‌ಕೋಟ್ ಏಕದಿನದಲ್ಲಿ ಅಲೆಕ್ಸ್ ಕಾರೆ ಹಾಗೂ ಸ್ಟೀವ್ ಸ್ಮಿತ್‌ರನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಯಜುವೇಂದ್ರ ಚಹಾಲ್ ಸಹ ಸ್ಪಿನ್ನರ್ ಯಾದವ್‌ರೊಂದಿಗೆ ಆಡುವ ಅವಕಾಶ ಪಡೆಯಲಿದ್ದಾರೆ. ಚಹಾಲ್‌ಗೆ ಐಪಿಎಲ್‌ನಲ್ಲಿ ಬೆಂಗಳೂರು ತವರು ಮೈದಾನವಾಗಿದೆ. ರಾಜ್‌ಕೋಟ್‌ನಲ್ಲಿ ಮುಹಮ್ಮದ್ ಶಮಿ ಆರಂಭದಲ್ಲಿ ದುಬಾರಿ ಬೌಲರ್ ಎನಿಸಿಕೊಂಡಿದ್ದರೂ ಆ ಬಳಿಕ ಬಿಗಿಯಾದ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯ ತಂಡ ಕೂಡ ಆಡುವ 11ರ ಬಳಗದಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಸ್ಟಾರ್ ಬ್ಯಾಟ್ಸ್‌ಮನ್ ಸ್ಮಿತ್‌ರನ್ನು ಕುಲದೀಪ್ ಕ್ಲೀನ್‌ಬೌಲ್ಡ್ ಮಾಡುವ ತನಕ 2ನೇ ಏಕದಿನದಲ್ಲಿ ಆಸೀಸ್ ಗೆಲುವಿನ ವಿಶ್ವಾಸದಲ್ಲಿತ್ತು. ಫಾರ್ಮ್‌ನಲ್ಲಿರುವ ಲ್ಯಾಬುಶೆನ್ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಆದರೆ,ನಿರ್ಣಾಯಕ ಸಮಯದಲ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಸಾಧಾರಣ ಪ್ರದರ್ಶನ ನೀಡುತ್ತಿದ್ದು, ಲೆಗ್ ಸ್ಪಿನ್ನರ್ ಆ್ಯಡಮ್ ಝಾಂಪ ಏಕದಿನ ಕ್ರಿಕೆಟ್‌ನಲ್ಲಿ ಐದನೇ ಬಾರಿ ಕೊಹ್ಲಿ ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ 73 ರನ್‌ಗೆ 2 ವಿಕೆಟ್ ಪಡೆದಿದ್ದ ರಿಚರ್ಡ್‌ಸನ್‌ಗೆ ವಿಶ್ರಾಂತಿ ನೀಡಿ ಜೋಶ್ ಹೇಝಲ್‌ವುಡ್‌ಗೆ ಅವಕಾಶ ನೀಡಲು ಆಸ್ಟ್ರೇಲಿಯ ಯೋಚಿಸುತ್ತಿದೆ.

ಪಿಚ್ ಹಾಗೂ ವಾತಾವರಣ

ಚಿನ್ನಸ್ವಾಮಿ ಸ್ಟೇಡಿಯಂ ಮತ್ತೊಂದು ರನ್ ಹೊಳೆಗೆ ಸಾಕ್ಷಿಯಾಗಬಹುದು. ಎರಡನೇ ಬೌಲಿಂಗ್ ಮಾಡುವ ತಂಡಕ್ಕೆ ಇಬ್ಬನಿ ಕಾಟ ಎದುರಾಗಬಹುದು. ಪಂದ್ಯದ ಅವಧಿಯಲ್ಲಿ ವಾತಾವರಣ ತಿಳಿಯಾಗಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News