ಆಸ್ಟ್ರೇಲಿಯನ್ ಓಪನ್ ಪ್ರಧಾನ ಸುತ್ತಿಗೆ ಪ್ರಜ್ಞೇಶ್ ಪ್ರವೇಶ

Update: 2020-01-18 17:33 GMT

ಮೆಲ್ಬೋರ್ನ್, ಜ.18: ಭಾರತದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಶನಿವಾರ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ನಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾದರು. ಪ್ರಜ್ಞೇಶ್ ಮೊದಲ ಸುತ್ತಿನ ತಡೆ ದಾಟಿದರೆ, ಎರಡನೇ ಸುತ್ತಿನಲ್ಲಿ ವಿಶ್ವದ ನಂ.2ನೇ ಆಟಗಾರ ನೊವಾಕ್ ಜೊಕೊವಿಕ್ ಸವಾಲು ಎದುರಿಸುವ ಸಾಧ್ಯತೆಯಿದೆ.

ಎಡಗೈ ಟೆನಿಸ್ ಪಟು ಪ್ರಜ್ಞೇಶ್ ಶುಕ್ರವಾರ ನಡೆದಿದ್ದ ಅಂತಿಮ ಕ್ವಾಲಿಫೈಯರ್ ಪಂದ್ಯದಲ್ಲಿ ಲಾಟ್ವಿಯದ ಎರ್ನೆಸ್ಟ್ಸ್ ಗುಲ್ಬಿಸ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಸೋತಿದ್ದರು. ಟೂರ್ನಮೆಂಟ್‌ಗೆ ನೇರ ಪ್ರವೇಶ ಪಡೆದಿದ್ದ ಓರ್ವ ಆಟಗಾರ ಟೂರ್ನಿಯಿಂದ ಹಿಂದೆಸರಿದ ಕಾರಣ ಅದೃಷ್ಟವಶಾತ್ ಪ್ರಜ್ಞೇಶ್ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.

ಪ್ರಜ್ಞೇಶ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸತತ ಐದನೇ ಬಾರಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಕೂಡ ಚೆನ್ನೈ ಆಟಗಾರ ಕ್ವಾಲಿಫೈಯರ್ ಮೂಲಕ ಮೆಲ್ಬೋರ್ನ್ ಟೂರ್ನಿಗೆ ಅರ್ಹತೆ ಪಡೆದಿದ್ದರು. ವಿಂಬಲ್ಡನ್, ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್‌ನಲ್ಲೂ ಉತ್ತಮ ರ್ಯಾಂಕಿಂಗ್‌ನ ಮೂಲಕ ಪ್ರಮುಖ ಸುತ್ತಿಗೆ ಪ್ರವೇಶ ಪಡೆದಿದ್ದರು.

 ಪ್ರಜ್ಞೇಶ್ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ತನಗಿಂತ 22 ರ್ಯಾಂಕ್ ಕೆಳಗಿರುವ ಜಪಾನ್‌ನ ಟಟ್ಸುಮಾ ಇಟೊಯಿಸ್‌ರನ್ನು ಎದುರಿಸಲಿದ್ದಾರೆ. ಮೊದಲ ಬಾರಿ ಈ ಇಬ್ಬರು ಮುಖಾಮುಖಿಯಾಗುತ್ತಿದ್ದಾರೆ.

30ರ ಹರೆಯದ ಪ್ರಜ್ಞೇಶ್‌ಗೆ ಮೊದಲ ಬಾರಿ ಗ್ರಾನ್‌ಸ್ಲಾಮ್‌ನ ಪ್ರಮುಖ ಸುತ್ತಿನ ಪಂದ್ಯವನ್ನು ಗೆಲ್ಲುವ ಅಪೂರ್ವ ಅವಕಾಶ ಒದಗಿ ಬಂದಿದೆ. ಮಾತ್ರವಲ್ಲ 2ನೇ ಸುತ್ತಿನಲ್ಲಿ ಸರ್ಬಿಯದ ದಿಗ್ಗಜ ಜೊಕೊವಿಕ್‌ರನ್ನು ಎದುರಿಸುವ ಸಾಧ್ಯತೆಯಿದೆ. ‘‘ನನಗೆ ಪ್ರಧಾನ ಸುತ್ತಿಗೆ ತಲುಪಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಾನೀಗ ಮೊದಲ ಸುತ್ತಿನ ಪಂದ್ಯದ ಮಾತ್ರ ಯೋಚಿಸುತ್ತಿರುವೆ. ಮೊದಲ ತಡೆ ದಾಟಲು ಎಲ್ಲ ಪ್ರಯತ್ನ ನಡೆಸುವೆ. ಇಟೊಯಿಸ್ ಓರ್ವ ಉತ್ತಮ ಆಟಗಾರ. ಅವರು ಅಗ್ರ-100ರಲ್ಲಿದ್ದಾರೆ. ಅವರನ್ನು ಮಣಿಸಲು ನಾನು ಚೆನ್ನಾಗಿ ಆಡಬೇಕಾಗಿದೆ’’ ಎಂದು ಪ್ರಜ್ಞೇಶ್ ಪಿಟಿಐಗೆ ತಿಳಿಸಿದರು.

2019ರ ಯುಎಸ್ ಓಪನ್‌ನಲ್ಲಿ ಯುವ ಆಟಗಾರ ಸುಮಿತ್ ನಗಾಲ್ ಸ್ವಿಸ್ ಲೆಜೆಂಡರಿ ರೋಜರ್ ಫೆಡರರ್‌ರನ್ನು ಎದುರಿಸಿದ್ದರು.ಕಠಿಣ ಪರಿಶ್ರಮಿ ಪ್ರಜ್ಞೇಶ್‌ರ ತಂದೆ ಅನಾರೋಗ್ಯಕ್ಕೀಡಾದ ಕಾರಣ 2019ರ ಋತುವಿನ ಅಂತ್ಯಕ್ಕೆ ಅಗ್ರ-100ರಲ್ಲಿ ಸ್ಥಾನ ಕಳೆದುಕೊಂಡಿದ್ದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಎಡವಿರುವ ನಗಾಲ್ ಹಾಗೂ ರಾಮಕುಮಾರ್ ಪ್ರಧಾನ ಸುತ್ತಿಗೆ ಪ್ರವೇಶಿಸಲು ವಿಫಲರಾಗಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News