ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಗೆ ರಾಹುಲ್ ವಾಪಸ್?

Update: 2020-01-18 17:35 GMT

ಬೆಂಗಳೂರು, ಜ.18: ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಪ್ರಸ್ತುತ ಭರ್ಜರಿ ಫಾರ್ಮ್ ನಲ್ಲಿರುವ ಕೆ.ಎಲ್.ರಾಹುಲ್ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ವಾಪಸಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ರವಿವಾರ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಮೊದಲು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್‌ನತ್ತ ಹೆಚ್ಚಿನ ಗಮನ ನೀಡುವ ನಿರೀಕ್ಷೆಯಿದೆ. ರಾಹುಲ್ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತದ ಆಟಗಾರನಾಗಿದ್ದಾರೆ. ಆದರೆ ಅವರು ಆಸ್ಟ್ರೇಲಿಯ ಪ್ರವಾಸದ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ರಾಹುಲ್‌ರಂತಹ ಆಟಗಾರನನ್ನು ಯಾವುದೇ ತಂಡದಿಂದ ಕೈಬಿಡುವುದು ತುಂಬಾ ಕಷ್ಟಕರ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಋತುವಿನಲ್ಲಿ ನಡೆದ ಸ್ವದೇಶಿ ಸರಣಿಯಲ್ಲಿ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಮೀಸಲು ಟೆಸ್ಟ್ ಆರಂಭಿಕ ಆಟಗಾರರಾಗಿದ್ದರು. ಇದೀಗ ರಾಹುಲ್ ಈ ಇಬ್ಬರನ್ನು ಹಿಂದಿಕ್ಕಿ ಆರಂಭಿಕನ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಬೆನ್ನಿನ ಶಸ್ತ್ರಚಿಕಿತ್ಸೆಯ ಬಳಿಕ ಹಾರ್ದಿಕ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಫಿಟ್ ಇದ್ದಾರೆಯೇ? ಎಂದು ತಿಳಿದುಕೊಳ್ಳಲು ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ಕಾಯುತ್ತಿದೆ. ಒಂದು ವೇಳೆ ಪಾಂಡ್ಯ ಫಿಟ್ ಆದರೆ ಏಕದಿನ ತಂಡಕ್ಕೆ ಆಯ್ಕೆಯಾಗುವುದು ನಿಶ್ಚಿತ. ಹಾರ್ದಿಕ್ ಫಿಟ್ನೆಸ್‌ನಲ್ಲಿ ಫೇಲಾದರೆ ಆಯ್ಕೆ ಸಮಿತಿಯು ಸೂರ್ಯಕುಮಾರ್ ಯಾದವ್‌ರತ್ತ ಚಿತ್ತ ಹರಿಸಬಹುದು. ತಾಂತ್ರಿಕವಾಗಿ ಕೇದಾರ್ ಜಾಧವ್‌ಗಿಂತ ಉತ್ತಮವಾಗಿರುವ ಅಜಿಂಕ್ಯ ರಹಾನೆ ಅವರನ್ನು ತಂಡಕ್ಕೆ ಪರಿಗಣಿಸುವ ಸಾಧ್ಯತೆಯಿದೆ. ‘‘ಕೇದಾರ್ 2023ರ ವಿಶ್ವಕಪ್‌ನಲ್ಲಿ ಆಡಲು ತೆರಳುವ ಬಗ್ಗೆ ಖಚಿತತೆ ಇಲ್ಲ. ಅವರೀಗ ಬೌಲಿಂಗ್ ಕೂಡ ಮಾಡುತ್ತಿಲ್ಲ. ಅವರು ಟ್ವೆಂಟಿ-20 ತಂಡಕ್ಕೆ ಆಯ್ಕೆಯಾಗದೇ ಇದ್ದರೆ ನ್ಯೂಝಿಲ್ಯಾಂಡ್‌ಗೆ ತೆರಳುವುದಿಲ್ಲ. ಸೂರ್ಯಾ ಅಥವಾ ರಹಾನೆ ಅವರು ಆಯ್ಕೆಯಾಗುವ ಸಾಧ್ಯತೆಯಿದೆ’’ಎಂದು ಆಯ್ಕೆಯ ಕುರಿತ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News