ದ.ಕ. ಪೋಲಿಯೋ ಮುಕ್ತ ಜಿಲ್ಲೆ: ಸಚಿವ ಕೋಟ

Update: 2020-01-19 12:20 GMT

ಮಂಗಳೂರು, ಜ.19: ಆರೋಗ್ಯ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯುತ್ತಮ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ, ಇತರ ಸಂಘ ಸಂಸ್ಥೆ ಮತ್ತು ಸಾರ್ವಜನಿಕರ ಸಹಕಾರದಿಂದ ಜಿಲ್ಲೆ ಪೋಲಿಯೋ ರೋಗದಿಂದ ಮುಕ್ತವಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 ದ.ಕ. ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದರಿಂದಲೇ ಕಳೆದ ಎರಡು ದಶಕಗಳಿಂದ ಯಾವುದೇ ಪೋಲಿಯೊ ಪ್ರಕರಣ ದಾಖಲಾಗಲಿಲ್ಲ. ರಾಜ್ಯದಲ್ಲಿ 2007ರಲ್ಲಿ ಕೊನೆಯ ಪೋಲಿಯೋ ಪ್ರಕರಣವು ರಾಜ್ಯಕ್ಕೆ ವಲಸೆ ಬಂದಿರುವ ಗುಂಪಿನಲ್ಲಿ ಪತ್ತೆಯಾಗಿತ್ತು. 1999ನೇ ಇಸವಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಕೊನೆಯ ಖಚಿತ ಪೋಲಿಯೋ ಪ್ರಕರಣ ಪತ್ತೆಯಾಗಿತ್ತು. ಆ ಬಳಿಕ ಈವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಲಿಲ್ಲ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಪ್ರಶಂಸನೀಯ ಎಂದರು.

ಪೋಲಿಯೋ ಲಸಿಕೆ ಹಾಕುವಂತಹ ದೇಶದ ಚಳವಳಿಯು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಇದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ. ಬಡತನ ರೇಖೆಗಿಂತ ಕೆಳಗೆ ಇರುವವರು ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಈ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ಮಾತನಾಡಿ, ಜಿಲ್ಲೆಯಾದ್ಯಂತ ಒಟ್ಟು 922 ಬೂತ್‌ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆದಿದೆ. ಬಂಟ್ವಾಳ ತಾಲೂಕಿನ 190, ಬೆಳ್ತಂಗಡಿಯ 164, ಮಂಗಳೂರಿನ 3458, ಪುತ್ತೂರಿನ 145, ಸುಳ್ಯದಲ್ಲಿ 75 ಬೂತ್‌ಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆದಿದೆ. ಮಂಗಳೂರು ಗ್ರಾಮಾಂತರದಲ್ಲಿ 2, ಪಾಲಿಕೆ ವ್ಯಾಪ್ತಿಯಲ್ಲಿ 3 ಮತ್ತು ಸುಳ್ಯದಲ್ಲಿ 2 ಮೊಬೈಲ್ ಬೂತ್‌ಗಳು ಅಲ್ಲದೆ ಒಟ್ಟು 28 ಟ್ರಾನ್ಸಿಟ್ ತಂಡಗಳು ಕೆಲಸ ನಿರ್ವಹಿಸಿದೆ. ಇದರ ಜತೆಯಲ್ಲಿ ಜ.20ರಂದು ಮನೆ ಮನೆ ಭೇಟಿಯ ಮೂಲಕ ಲಸಿಕೆ ಹಾಕುವ ಕೆಲಸ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ದ.ಕ. ಜಿಪಂ ಸಿಇಒ ಸೆಲ್ವಮಣಿ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಆರೋಗ್ಯ ಮತ್ತು ಸ್ಥಾಯಿ ಸಮಿತಿಯ ಧನಲಕ್ಷ್ಮೀ, ಲೇಡಿಗೋಷನ್ ಅಧೀಕ್ಷಕಿ ಡಾ.ಸವಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ರಾಜೇಶ್, ರೋಟರಿ 3181ರ ಚೇರ್‌ಮೆನ್ ಡಾ.ನೋರ್ಮನ್ ಮೆಂಡೋನ್ಸಾ, ರೋಟರಿ ಮಂಗಳೂರು ಉತ್ತರ ಅಧ್ಯಕ್ಷ ನಯನ ಕುಮಾರ್, ವೈದ್ಯರಾದ ಡಾ. ಸತೀಶ್ಚಂದ್ರ, ಡಾ.ಮುಹಮ್ಮದ್, ಡಾ.ದುರ್ಗಾಪ್ರಸಾದ್, ಡಾ.ಬಾಲಕೃಷ್ಣ ಸೇರಿದಂತೆ ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯರು, ಸಿಬಂದಿವರ್ಗದವರು ಇದ್ದರು.

ಡಿ.ಸಿ., ಸಿಇಒ ಮಕ್ಕಳಿಗೂ ಲಸಿಕೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಪುತ್ರಿ 1 ವರ್ಷ 9 ತಿಂಗಳಿನ ಶ್ರೇಯಾ ಮತ್ತು ಜಿಪಂ ಸಿಇಒ ಸೆಲ್ವಮಣಿ ಅವರ ಪುತ್ರ 4 ವರ್ಷ 4 ತಿಂಗಳಿನ ಶಾಸ್ವಿನ್ ನವಲ್ ಅವರಿಗೂ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕೆ ಹಾಕಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News