‘ಎನ್‌ಆರ್‌ಸಿ’ಯಿಂದ ಹಿಂದೂಗಳಿಗೆ ಸಂಕಷ್ಟ: ಶ್ರೀನಿವಾಸ ಕಕ್ಕಿಲ್ಲಾಯ

Update: 2020-01-19 12:24 GMT

ಮಂಗಳೂರು, ಜ.19: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ರಿಜಿಸ್ಟ್ರಿ, ರಾಷ್ಟ್ರೀಯ ಜನರ ರಿಜಿಸ್ಟ್ರಿ ಇತ್ಯಾದಿಯು ಅನಗತ್ಯ ಕ್ರಮಗಳಾಗಿದ್ದು, ಇದರಿಂದ ಜನರ ಸಮಸ್ಯೆಗಳು ನೀಗುವ ಬದಲು ಸಂಕಷ್ಟಗಳು ಹೆಚ್ಚಾಗಲಿವೆ. ಈ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರ ಸಮಸ್ಯೆಗಳಾಗಲಿವೆ ಮತ್ತು ಹಿಂದೂಗಳು ಇದರ ಬಗ್ಗೆ ಭಯಪಡಬೇಕಾಗಿಲ್ಲ ಎಂದೂ ಅಪಪ್ರಚಾರ ನಡೆಯುತ್ತಿದೆ. ಆದರೆ ಇದರಿಂದ ಮುಸ್ಲಿಮರಿಗಿಂತ ಹಿಂದೂಗಳಿಗೆ ಹೆಚ್ಚು ಸಂಕಷ್ಟವಾಗಲಿದೆ ಎಂದು ವೈದ್ಯ ಹಾಗೂ ಪ್ರಗತಿಪರ ಚಿಂತಕ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯರು ಹೇಳಿದರು.

ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ರವಿವಾರ ಪಕ್ಷದ ಕಾರ್ಯಕರ್ತರಿಗೆ ಆಯೋಜಿಸಲಾದ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಸ್ಸಾಂದಲ್ಲಿ ಎನ್‌ಆರ್‌ಸಿಯಿಂದ 19.1 ಲಕ್ಷ ಮಂದಿ ಪೌರತ್ವದಿಂದ ಹೊರಗುಳಿದಿದ್ದಾರೆ. ಅವರಲ್ಲಿ ಶೇ.75 ಅಂದರೆ 12.5 ಲಕ್ಷ ಮಂದಿ ಹಿಂದೂಗಳಾಗಿದ್ದಾರೆ. ಇದನ್ನು ದೇಶಕ್ಕೆ ಅನ್ವಯಿಸಿದರೆ ಹಿಂದೂಗಳೇ ಅತ್ಯಂತ ಸಂಕಷ್ಟಗಳಿಗೆ ಒಳಗಾಗಲಿದ್ದಾರೆ. ಅಸ್ಸಾಂನಲ್ಲಿ ಪೌರತ್ವದಿಂದ ಹೊರಗುಳಿದ ಹಿಂದೂಗಳ ರಕ್ಷಣೆಗಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ. ಆದರೆ ಈ ಕ್ರಮವನ್ನು ಅಸ್ಸಾಂನ ಜನರು ವಿರೋಧಿಸುತ್ತಿದ್ದಾರೆ. ಅಸ್ಸಾಂನಲ್ಲಿ ಬಾಂಗ್ಲಾ ಬೆಂಗಾಳಿಗಳನ್ನು ಹೊರದೂಡಲು ಪೌರತ್ವ ರಿಜಿಸ್ಟ್ರಿ ಮಾಡಲಾಗಿದೆ. ಈಗ ಅವರಿಗೆ ಪೌರತ್ವ ಕೊಡುವುದರಿಂದ ಅಸ್ಸಾಂ ಜನರಿಗೆ ತೊಂದರೆಯಾಗಲಿದೆ ಎಂಬುದು ಅಸ್ಸಾಮಿಗರ ವಾದವಾಗಿದೆ. ದೇಶದ ಸಾಧಾರಣ ಶೇ.80 ಜನರಲ್ಲಿ ಜನನ ಪ್ರಮಾಣ ಪತ್ರಗಳಿಲ್ಲ. ಹಾಗಿರುವಾಗ ಅವರ ತಂದೆತಾಯಿಗಳ ಬಗ್ಗೆಗಿನ ದಾಖಲೆ ಒದಗಿಸುವುದು ಅಸಾಧ್ಯ. ಅದನ್ನೆಲ್ಲಾ ಒದಗಿಸಲು ಸಾಧ್ಯವಾಗದವರು ಪೌರತ್ವ ರಹಿತರಾಗುತ್ತಾರೆ. ಇದರಿಂದ ದೇಶದ ಬಡವರು, ದಲಿತರು, ಆದಿವಾಸಿಗಳು ಹೆಚ್ಚು ಸಂಕಷ್ಟಗಳಿಗೆ ಒಳಗಾಗಲಿದ್ದಾರೆ ಎಂದು ಶ್ರೀನಿವಾಸ ಕಕ್ಕಿಲ್ಲಾಯ ನುಡಿದರು.

ರಾಷ್ಟ್ರೀಯ ಪೌರತ್ವ ರಿಜಿಸ್ಟ್ರಿ ಬದಲಾಗಿ ರಾಷ್ಟ್ರೀಯ ಜನರ ರಿಜಿಸ್ಟ್ರಿಯನ್ನು ಜನಗಣತಿಯೊಂದಿಗೆ ನಡೆಸಲಾಗುವುದು ಎಂದು ಸರಕಾರ ಹೇಳಿದೆ. ಆದರೆ ಈ ಮಾಹಿತಿಯನ್ನು ಪೌರತ್ವ ರಿಜಿಸ್ಟ್ರಿಗೆ ಉಪಯೋಗಿಸುವ ಎಲ್ಲಾ ಸಾಧ್ಯತೆಗಳಿವೆ. 2011ರಲ್ಲೂ ಜನರ ರಿಜಿಸ್ಟ್ರಿ ನಡೆಸಲಾಗಿತ್ತು. 2020ರಲ್ಲಿ ಅದನ್ನು ಮತ್ತೆ ನಡೆಸುವಾಗ ನಾವು ಕೊಟ್ಟ ಮಾಹಿತಿ 2011ರ ಮಾಹಿತಿಗಳಿಗೆ ಅಲ್ಪಸ್ವಲ್ಪ ವ್ಯತ್ಯಾಸವಾದರೆ ಆಗ ಆ ವ್ಯಕ್ತಿ ಸಂಶಾಯಾಸ್ಪದ ಪಟ್ಟಿಯಲ್ಲಿ ಸೇರುತ್ತಾನೆ. ಮತ್ತೆ ಅದನ್ನು ಸರಿಮಾಡಲು ಹರಸಾಹಸ ಪಡಬೇಕಷ್ಟೆ. ಇದನ್ನೆಲ್ಲಾ ಜನರಿಗೆ ತಿಳಿಸಬೇಕಾಗಿದೆ. ಜನರಿಗೆ ಈ ಬಗ್ಗೆ ಸರಿಯಾದ ಮಾತಿಗಳಿಲ್ಲ. ಹೆಚ್ಚಿನವರು ಸಂಘಪರಿವಾರದ ಸುಳ್ಳುಗಳಿಗೆ ಮರುಳಾಗಿದ್ದಾರೆ ಎಂದು ಶ್ರೀನಿವಾಸ ಕಕ್ಕಿಲ್ಲಾಯ ನುಡಿದರು.

ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶೇಖರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News