ಗೊಳಿದಡಿಗುತ್ತಿನ ‘ಗುತ್ತುದ ವರ್ಷದ ಪರ್ಬೊ’ ಉದ್ಘಾಟನೆ

Update: 2020-01-19 12:34 GMT

ಗುರುಪುರ, ಜ.19: ಇಲ್ಲಿನ ಗೋಳಿದಡಿ ಗುತ್ತಿನ ಎರಡು ದಿನಗಳ ವಾರ್ಷಿಕ ‘ಗುತ್ತುದ ವರ್ಸೊದ ಪರ್ಬೊ-ಪರ್ಬೊದ ಸಿರಿ’ಯು ಪಾರಂಪರಿಕ ಶೈಲಿಯಲ್ಲಿ ರವಿವಾರ ಉದ್ಘಾಟನೆಗೊಂಡಿತು.

ಸ್ಥಳೀಯ ಕೃಷಿಕ ಬೆಳ್ಳಿಬೆಟ್ಟು ಗುತ್ತು ರಮೇಶ್ ಹೆಗ್ಡೆ ‘ಪರ್ಬೊದ ಸಿರಿ’ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಾಲ್ಯದ ದಿನಗಳಲ್ಲಿ ನಾನು ಕಂಡ ಪರ್ಬದ(ಹಬ್ಬ) ಸೊಬಗನ್ನು ಇಂದು ಗೋಳಿದಡಿ ಗುತ್ತಿನ ಪರ್ಬೊದ ಸಿರಿಯಲ್ಲಿ ಮತ್ತೊಮ್ಮೆ ಕಂಡೆ. ಇದು ನಮ್ಮ ಭಾಗ್ಯ. ಗ್ರಾಮೀಣ ಪ್ರದೇಶದ ಮೂಲ ಸಂಸ್ಕೃತಿ ಬಿಂಬಿಸುವ ಇಂತಹ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ಆಗಾಗ್ಗೆ ನಡೆಯಬೇಕು ಎಂದರು.

ದೇಶೀ ಇಟ್ಟಿಗೆ ತಯಾರಕ ಯಾಕೂಬ್ ಅಹ್ಮದ್ ಸಲಾಂ ಮಾತನಾಡಿ 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಡೆದಾಡಲು ಭಯವಾಗುತ್ತಿತ್ತು. ಆದರೆ ಗೊಳಿದಡಿ ಗುತ್ತಿನ ಪ್ರಭಾವದಿಂದ ಈಗ ಫಲ್ಗುಣಿ ತೀರದ ಈ ಪ್ರದೇಶ ನಂದನವನವಾಗಿದೆ ಎಂದರು.
ವೇದಿಕೆಯಲ್ಲಿ ಹಿರಿಯ ನಾಗರಿಕರಾದ ವನಜಾ ದೇರಣ್ಣ ಶೆಟ್ಟಿ ಮಠದಬೈಲು, ಜಿ ಕೃಷ್ಣಪ್ಪಬೆಳ್ಳೂರು, ರಿಕ್ಷಾ ಚಾಲಕ ಸಿಲ್ವೆಸ್ಟರ್ ಡಿಸೋಜ ತಾರಿಗುರಿ ಹಾಗೂ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಅವರ ಪತ್ನಿ, ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು. ಸುನಿಲಾ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪರ್ಬೊದ ಸಿರಿ:

ಗೋಳಿದಡಿ ಗುತ್ತಿನ ಸುತ್ತಲ ಪ್ರದೇಶದಲ್ಲಿ ಸಾಲಾಗಿ ತೆರೆದುಕೊಂಡಿರುವ ಅಂಗಡಿಗಳು ಹಾಗೂ ಇತರ ಸರಕು ಮಳಿಗೆಗಳು ಪರ್ಬೊದ ಸಿರಿಗೆ ಅಕ್ಷರಶಃ ಜಾತ್ರೆಯ ಮೆರಗು ತಂದುಕೊಟ್ಟಿವೆ. ಬೈಂದೂರಿನ ದಾಮೋದರ ಆಚಾರ್ಯ ಮತ್ತು ಕುಟುಂಬಿಕರ ಕಬ್ಬಿಣದ ಸೊತ್ತುಗಳ (ಕತ್ತಿ, ಹಾರೆ, ಗುದ್ದಲಿ, ಚೂರಿ...) ಕೊಟ್ಯ (ಸಿದಿ ಅಂಗಡಿ), ಜಿವಿಎಸ್ ಉಳ್ಳಾಲರ ತುಳು ಕ್ಯಾಲೆಂಡರ್ ಮತ್ತು ಪುಸ್ತಕಗಳ ಅಂಗಡಿ, ಉಪ್ಪಿನಕಾಯಿ, ಬಟ್ಟೆಬರೆ ಹಾಗೂ ಇತರ ದಿನ ಬಳಕೆಯ ಸೊತ್ತುಗಳ ಅಂಗಡಿಗಳು ಗ್ರಾಹಕರ ಗಮನ ಸೆಳೆಯುತ್ತಿತ್ತು.

ಪಾನೀಯ ವ್ಯವಸ್ಥೆ :

ಪರ್ಬೊದ ಸಿರಿಗೆ ಆಗಮಿಸಿದ ಮಂದಿಗೆ ಹತ್ತಿರದಲ್ಲೇ ತೆರೆಯಲಾಗಿರುವ ಅಂಗಡಿಯೊಂದರಲ್ಲಿ ಪ್ರಸಾದ ರೂಪವಾಗಿ ಕಬ್ಬಿನ ಹಾಲು, ಒಂದೊಂದು ಕಲ್ಲಂಗಡಿ ಹಾಗೂ ಮಹಿಳೆಯರಿಗೆ ‘ಕೈಬಳೆ’ ಇಡುವ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಗುತ್ತಿನ ವರ್ಷದ ಒಡ್ಡೊಲಗ, ಸುಗಮ ಸಂಗೀತ ಹಾಗೂ ದೇಯಿ’ ಸತ್ಯ ಕಥಾನಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News