ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ: ನಿರ್ಭಯಾ ಪ್ರಕರಣದ ದೋಷಿಯ ವಕೀಲನಿಗೆ ನೋಟಿಸ್

Update: 2020-01-19 15:00 GMT

ಹೊಸದಿಲ್ಲಿ, ಜ. 19: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ಪವನ್ ಕುಮಾರ್ ಗುಪ್ತಾನ ವಕೀಲ ಎ.ಪಿ. ಸಿಂಗ್‌ಗೆ ದಿಲ್ಲಿಯ ಬಾರ್ ಕೌನ್ಸಿಲ್ ನೋಟಿಸು ಜಾರಿ ಮಾಡಿದೆ.

ವಿಚಾರಣೆಗೆ ಹಾಜರಾಗದೇ ಇರುವುದು ಹಾಗೂ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಎ.ಪಿ. ಸಿಂಗ್‌ಗೆ ನೋಟಿಸು ಜಾರಿ ಮಾಡುವಂತೆ ಕಳೆದ ತಿಂಗಳು ದಿಲ್ಲಿ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿ ಬಾರ್ ಕೌನ್ಸಿಲ್ ಎ.ಪಿ. ಸಿಂಗ್‌ಗೆ ನೋಟಿಸು ಜಾರಿ ಮಾಡಿದೆ. ಅಲ್ಲದೆ, ಎರಡು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

2012 ಡಿಸೆಂಬರ್‌ನಲ್ಲಿ ಘಟನೆ ನಡೆದಾಗ ಪವನ್ ಕುಮಾರ್ ಗುಪ್ತಾ ಅಪ್ರಾಪ್ತನಾಗಿದ್ದ ಎಂಬ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್ 19ರಂದು ತಿರಸ್ಕರಿಸಿತ್ತು. ನ್ಯಾಯಾಲಯಕ್ಕೆ ಹಾಜರಾಗದ ಹಾಗೂ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಎ.ಪಿ. ಸಿಂಗ್ ನಡವಳಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ, 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ದೂರುದಾರ ಪವನ್ ಕುಮಾರ್ ಗುಪ್ತಾ ಪರ ವಕೀಲ ಎ.ಪಿ. ಸಿಂಗ್ ವಿರುದ್ಧ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಳೆದ ವರ್ಷ ಡಿಸೆಂಬರ್ 19ರಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಆದೇಶಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಎ.ಪಿ. ಸಿಂಗ್‌ಗೆ ನೋಟಿಸು ಜಾರಿ ಮಾಡಲು ಸರ್ವಸಮ್ಮತವಾಗಿ ನಿರ್ಧರಿಸಲಾಯಿತು ಹಾಗೂ ನೋಟಿಸು ಸ್ವೀಕರಿಸಿದ ಎರಡು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು ಎಂದು ದಿಲ್ಲಿ ಬಾರ್ ಕೌನ್ಸಿಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News