ಸುಂಕಮುಕ್ತ ಮದ್ಯ ಖರೀದಿಯನ್ನು ಒಂದು ಬಾಟಲ್‌ಗೆ ಸೀಮಿತಗೊಳಿಸುವ ಸಾಧ್ಯತೆ

Update: 2020-01-19 15:01 GMT

ಹೊಸದಿಲ್ಲಿ,ಜ.19: ವ್ಯಾಪಾರ ಕೊರತೆಗೆ ಕಡಿವಾಣ ಹಾಕಲು ಅನಗತ್ಯ ಸರಕುಗಳ ಆಮದನ್ನು ಕಡಿಮೆಗೊಳಿಸುವ ಕ್ರಮಗಳ ಅಂಗವಾಗಿ ಸುಂಕಮುಕ್ತ ಮಳಿಗೆಗಳಲ್ಲಿ ತೆರಿಗೆಮುಕ್ತ ಮದ್ಯದ ಖರೀದಿಯನ್ನು ಒಂದು ಬಾಟಲ್‌ ಗೆ ಸೀಮಿತಗೊಳಿಸುವಂತೆ ವಾಣಿಜ್ಯ ಸಚಿವಾಲಯವು ವಿತ್ತ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇಂತಹ ಮಳಿಗೆಗಳಲ್ಲಿ ಸಿಗರೇಟ್ ಕಾರ್ಟನ್‌ಗಳ ಖರೀದಿಯನ್ನು ನಿಷೇಧಿಸುವಂತೆಯೂ ಅದು ಶಿಫಾರಸು ಮಾಡಿದೆ.

ಈ ಶಿಫಾರಸುಗಳು ಮುಂಬರುವ ಮುಂಗಡಪತ್ರಕ್ಕಾಗಿ ವಾಣಿಜ್ಯ ಸಚಿವಾಲಯದ ಪ್ರಸ್ತಾವಗಳಲ್ಲಿ ಸೇರಿವೆ.

ಹಾಲಿ ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಸುಂಕಮುಕ್ತ ಮಳಿಗೆಗಳಿಂದ ಎರಡು ಲೀ.ಮದ್ಯ ಮತ್ತು ಒಂದು ಕಾರ್ಟನ್ ಸಿಗರೇಟ್ ಖರೀದಿಸಲು ಅವಕಾಶವಿದೆ.

ಹಲವಾರು ದೇಶಗಳು ಅಂತರರಾಷ್ಟ್ರೀಯ ಪ್ರಯಾಣಿಕರು ಒಂದು ಲೀ.ಮದ್ಯವನ್ನು ಖರೀದಿಸಲು ಮಾತ್ರ ಅವಕಾಶ ನೀಡುತ್ತಿದ್ದು,ಈ ಪದ್ಧತಿಯನ್ನು ಭಾರತದಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ ಎಂದು ವಾಣಿಜ್ಯ ಸಚಿವಾಲಯದಲ್ಲಿನ ಮೂಲಗಳು ತಿಳಿಸಿವೆ.

ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಸುಂಕಮುಕ್ತ ಮಳಿಗೆಗಳಲ್ಲಿ ಯಾವುದೇ ಆಮದು ಶುಲ್ಕವನ್ನು ಪಾವತಿಸದೆ ಸುಮಾರು 50,000 ರೂ.ವೌಲ್ಯದ ಸರಕುಗಳನ್ನು ಖರೀದಿಸಬಹುದಾಗಿದೆ.

‘ಮೇಕ್ ಇನ್ ಇಂಡಿಯಾ’ವನ್ನು ಉತ್ತೇಜಿಸಲು ಮತ್ತು ತಯಾರಿಕಾ ಕ್ಷೇತ್ರದ ಹೆಚ್ಚಿನ ಬೆಳವಣಿಗಾಗಿ ಕಾಗದ,ಪಾದರಕ್ಷೆಗಳು,ರಬ್ಬರ್ ವಸ್ತುಗಳು ಮತ್ತು ಆಟಿಕೆಗಳಂತಹ ಹಲವಾರು ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವಂತೆಯೂ ವಾಣಿಜ್ಯ ಸಚಿವಾಲಯವು ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News