ಸಿಎಎ ವಿರುದ್ಧ ಪ್ರತಿಭಟನೆ; ಪೊಲೀಸರು ಹೊದಿಕೆಗಳನ್ನು ಹೊತ್ತೊಯ್ದ ಆರೋಪ

Update: 2020-01-19 16:02 GMT

ಲಕ್ನೋ,ಜ.19: ದಿಲ್ಲಿಯ ಶಾಹೀನ್‌ಬಾಗ್ ಮಾದರಿಯಲ್ಲಿ ಇಲ್ಲಿಯ ಘಂಟಾನಗರ ಪಾರ್ಕ್‌ನಲ್ಲಿ ಸುಮಾರು 50 ಮಹಿಳೆಯರು ಶುಕ್ರವಾರ ರಾತ್ರಿಯಿಂದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧ ನಡೆಸುತ್ತಿರುವ ಧರಣಿಯು ರವಿವಾರವೂ ಮುಂದುವರಿದಿದೆ. ಧರಣಿಯಲ್ಲಿ ಮಕ್ಕಳೂ ಪಾಲ್ಗೊಂಡಿದ್ದಾರೆ. ಕೆಲವು ಸಂಘಟನೆಗಳು ತಮಗೆ ಒದಗಿಸಿದ್ದ ಹೊದಿಕೆಗಳನ್ನು ಪೊಲೀಸರು ಹೊತ್ತೊಯ್ದಿದ್ದಾರೆ ಎಂದು ಕೆಲವು ಮಹಿಳೆಯರು ಆರೋಪಿಸಿದ್ದಾರೆ.

ಮಹಿಳಾ ಪ್ರತಿಭಟನಾಕಾರರ ಆರೋಪವನ್ನು ತಳ್ಳಿಹಾಕಿರುವ ಲಕ್ನೋ ಪೊಲೀಸರು,‘ಪ್ರತಿಭಟನೆಯು ಕಾನೂನುಬಾಹಿರವಾಗಿದ್ದು,ಕೆಲವರು ಹಗ್ಗದ ಬೇಲಿ ನಿರ್ಮಿಸಿ ಪ್ರದೇಶವನ್ನು ನಿರ್ಬಂಧಿಸಲು ಪ್ರಯತ್ನಿಸಿದ್ದರು. ಅವರಿಗೆ ಹಾಗೆ ಮಾಡಲು ಅವಕಾಶ ನೀಡಲಾಗಿರಲಿಲ್ಲ. ಪಾರ್ಕ್ ಆವರಣದಲ್ಲಿ ಕೆಲವು ಸಂಘಟನೆಗಳು ಹೊದಿಕೆಗಳನ್ನು ವಿತರಿಸುತ್ತಿದ್ದವು. ಇದರಿಂದಾಗಿ ಪ್ರತಿಭಟನೆಯ ಭಾಗವಾಗಿರದ ಸಮೀಪದ ನಿವಾಸಿಗಳು ಹೊದಿಕೆಗಳಿಗಾಗಿ ಪಾರ್ಕ್‌ಗೆ ಬರುತ್ತಿದ್ದರು. ಪೊಲೀಸರು ಅವರನ್ನು ಮತ್ತು ಹೊದಿಕೆಗಳನ್ನು ವಿತರಿಸುತ್ತಿದ್ದ ಸಂಘಟನೆಗಳನ್ನು ಅಲ್ಲಿಂದ ತೆರವುಗೊಳಿಸಿದ್ದು,ಅವರ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಲಾಗಿದೆ ’ ಎಂದು ಟ್ವೀಟಿಸಿದ್ದಾರೆ. ವದಂತಿಗಳನ್ನು ಹರಡದಂತೆ ಅವರು ಜನರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News