ಎನ್ ಆರ್ ಸಿ ದುಂದುವೆಚ್ಚದ ಅರ್ಥಹೀನ, ಗೊಂದಲಕಾರಿ ಪ್ರಕ್ರಿಯೆಯಾಗಬಹುದು: ಚೇತನ್ ಭಗತ್

Update: 2020-01-20 09:06 GMT

ಹೊಸದಿಲ್ಲಿ: "ಎನ್‍ಆರ್‍ಸಿ ಜಾತ್ಯತೀತವಾಗಿರಬಹುದು. ಆದರೆ ಅದು ಎಲ್ಲಾ ಭಾರತೀಯರಿಗೆ ಜಾತ್ಯತೀತ ಕಿರುಕುಳವಾಗಿದೆ. ನಮ್ಮ ಬಳಿ ಮತದಾರರ ಗುರುತು ಪತ್ರ, ಆಧಾರ್, ಪಾಸ್‍ ಪೋರ್ಟ್ ಇದೆ. ಜನರು ಎಷ್ಟು ಬಾರಿ ತಮ್ಮ ಗುರುತಿಗೆ ಪುರಾವೆ  ನೀಡಬೇಕು?'' ಎಂದು ಖ್ಯಾತ ಲೇಖಕ ಚೇತನ್ ಭಗತ್ ಪ್ರಶ್ನಿಸಿದ್ದಾರೆ.

ಬಿಜೆಪಿಯ ಗುರುತು ಆಧರಿತ ರಾಜಕಾರಣವು ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿರುವುದರಿಂದ ಎನ್‍ಆರ್‍ ಸಿ ಪುನರ್‍ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

"ಜನರಲ್ಲಿರುವ ಭಯ ಕಲ್ಪನೆ ಎಂದು ಹೇಳಲು ಸಾಧ್ಯವಿಲ್ಲ, ಅದು ನಿಜವಾದ ಭಯ. ಬಿಜೆಪಿ ಯಾವತ್ತೂ ಧ್ರುವೀಕರಣ ಯತ್ನ ನಡೆಸಿದೆಯೆಂದು ಜನರು ಅಂದುಕೊಂಡಿದ್ದಾರೆ. ಎನ್‍ಆರ್‍ ಸಿಯನ್ನು ಬೇರೆ ಸರಕಾರ ಪ್ರಸ್ತಾಪಿಸಿದ್ದರೆ ಹಾಗೂ ಅಲ್ಲಿ ನಂಬಿಕೆ  ಎಂಬುದಿದ್ದರೆ ಜನರು ಅದನ್ನು ಉತ್ತಮವಾಗಿ ಸ್ವೀಕರಿಸುವ ಸಾಧ್ಯತೆಯಿತ್ತು'' ಎಂದು ಅವರು ಹೇಳಿದರು.

"ಅದೊಂದು ದುಂದುವೆಚ್ಚದ ಅರ್ಥಹೀನ ಹಾಗೂ ಗೊಂದಲಕಾರಿ ಪ್ರಕ್ರಿಯೆಯಾಗಬಹುದು. ನಾಗರಿಕ ಯುದ್ಧಕ್ಕೂ ದಾರಿ ಮಾಡಿಕೊಡಬಹುದು. ಜನರ ಬಳಿ ದಾಖಲೆಗಳಿದ್ದರೂ ಅಧಿಕಾರಿಗಳು ಅವುಗಳನ್ನು ತಿರಸ್ಕರಿಸಬಹುದು. ಆಗ ನೀವೇನು ಮಾಡುತ್ತೀರಿ ನ್ಯಾಯಾಲಯಕ್ಕೆ ಹೋಗುತ್ತೀರಾ, ಎನ್‍ಆರ್‍ ಸಿಯಿಂದ ಹೊರಗುಳಿದ ಕೋಟಿಗಟ್ಟಲೆ ಜನರನ್ನು ನಿಭಾಯಿಸಲೂ ಸರಕಾರ ಹೆಣಗಾಡಬೇಕಾದೀತು'' ಎಂದು ಅವರು ಹೇಳಿದರು.

"ಶೇ 5ರಷ್ಟು ಜನರೂ ಅಕ್ರಮ ವಾಸಿಗಳು ಎಂದು ತಿಳಿದು ಬಂದರೆ ಆರು ಕೋಟಿ ಜನರನ್ನು ಏನು ಮಾಡುವುದು? ಅವರನ್ನು ಕಳುಹಿಸಲು ಸಾಧ್ಯವಿಲ್ಲ, ಏನೂ ಮಾಡಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು.

"ಎನ್‍ಆರ್‍ ಸಿಯನ್ನು ಖಾಯಂ ಆಗಿ ರದ್ದುಗೊಳಿಸಬೇಕೆಂದು ನಾನು ಹೇಳುವುದಿಲ್ಲ, ಆದರೆ ಅದನ್ನು ದೀರ್ಘಾವಧಿ ತೆರೆಮರೆಗೆ ಸರಿಸಿ ಸರಿಯಾದ ವ್ಯವಸ್ಥೆಗಳಿರುವಾಗ ಮತ್ತೆ ಮುಂದಕ್ಕೆ ತರಬಹುದು'' ಎಂದು ಭಗತ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News