ಸಿಎಎ ಪ್ರತಿಭಟನೆ ವೇಳೆ ಮುಸ್ಲಿಮರನ್ನು ಗುರಿಯಾಗಿಸಿ ಪೊಲೀಸರಿಂದ ದೌರ್ಜನ್ಯ: ಜನತಾ ನ್ಯಾಯಾಧೀಕರಣ

Update: 2020-01-20 10:56 GMT
ಫೈಲ್ ಚಿತ್ರ

ಹೊಸದಿಲ್ಲಿ : ''ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾದವರ ಮೇಲೆ ಪೊಲೀಸರು ವ್ಯಾಪಕ ದೌರ್ಜನ್ಯ ನಡೆಸಿದ್ದಾರೆನ್ನಲಾದ ಹಿನ್ನೆಲೆಯಲ್ಲಿ ರಾಜಧಾನಿ ದಿಲ್ಲಿಯಲ್ಲಿ  ಜನತಾ ನ್ಯಾಯಾಧೀಕರಣ ಜ.16ರಂದು ರಾಜ್ಯದಲ್ಲಿ ನಡೆದ ಪೊಲೀಸ್ ದೌರ್ಜನ್ಯಗಳ ಕರಾಳ ಮುಖವನ್ನು ಅನಾವರಣಗೊಳಿಸಿದೆ.

''ಉತ್ತರ ಪ್ರದೇಶದ ಆಡಳಿತದ ಉನ್ನತ ಮಟ್ಟದಿಂದ ಹಿಡಿದು ಸಂಪೂರ್ಣ ಆಡಳಿತವು ರಾಜ್ಯದ ಮುಸ್ಲಿಂ ಜನಸಂಖ್ಯೆಯ ಮೇಲೆ ಹಾಗೂ ಆಂದೋಲನದ ಮುಂಚೂಣಿ ವಹಿಸಿದ ಸಾಮಾಜಿಕ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸಿದೆ,'' ಎಂದು  ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರು, ದಿಲ್ಲಿ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ, ಖ್ಯಾತ ಶಿಕ್ಷಣ ತಜ್ಞರು ಹಾಗು ನಿವೃತ್ತ ಅಧಿಕಾರಿಗಳನ್ನೊಳಗೊಂಡ  ನ್ಯಾಯಧೀಕರಣ ಹೇಳಿದೆ.

ಪೊಲೀಸ್ ದೌರ್ಜನ್ಯದ ಕುರಿತು ಸಂತ್ರಸ್ತರ ದೂರುಗಳನ್ನು ದಾಖಲಿಸಿಕೊಳ್ಳಲಾಗಿಲ್ಲ, ಇಲ್ಲವೇ ಸರಿಯಾಗಿ ದಾಖಲಿಸಲಾಗಿಲ್ಲ ಎಂಬುದು ಆಡಳಿತವು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದನ್ನು ಸಾಬೀತು ಪಡಿಸಿದೆ,'' ಎಂದು ನ್ಯಾಯಾಧೀಕರಣ ಹೇಳಿದೆ.

ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳ  ನಷ್ಟಕ್ಕೆ ಕಾರಣರೆಂದು ನ್ಯಾಯಾಲಯಗಳಿಂದ ಸಾಬೀತಾಗುವ ಮುನ್ನವೇ ಹಲವರಿಗೆ ನೋಟಿಸುಗಳನ್ನು ಜಾರಿಗೊಳಿಸಿರುವುದು ಅಕ್ರಮ ಎಂದು ನ್ಯಾಯಾಧಿಕರಣ ಹೇಳಿದೆ.

ಆಡಳಿತಕ್ಕೆ ಅಪಥ್ಯವಾಗಬಹುದೆಂಬ ಭಯದಿಂದ ಹಿಂಸೆಯಲ್ಲಿ ಗಂಭೀರ ಗಾಯಗೊಂಡವರನ್ನು ದಾಖಲಿಸಿಕೊಳ್ಳಲು ಕೆಲ ಆಸ್ಪತ್ರೆಗಳು ನಿರಾಕರಿಸಿವೆ ಎಂದು ಹಲವರು ದೂರಿದ್ದಾರೆಂದು ನ್ಯಾಯಾಧೀಕರಣ ಹೇಳಿದೆಯಲ್ಲದೆ ಇದರಿಂದಾಗಿ ಕೆಲವರು  ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಹಾಗೂ ಇನ್ನು ಕೆಲವರು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡುವ ವೇಳೆ ಸಮಯ ಪ್ರಾಣ ಕಳೆದುಕೊಳ್ಳುವಂತಾಯಿತು. ಸರಕಾರ ಯಾ ಯಾವುದೇ ಸಂಸ್ಥೆಯ ಇಂತಹ ವರ್ತನೆ 21ನೇ ವಿಧಿಯ  ಹಾಗೂ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳಲ್ಲ. ಭಾರತ ಸಹಿ ಹಾಕಿರುವ ಅಂತರಾಷ್ಟ್ರೀಯ ಒಪ್ಪಂದಗಳ ಹಾಗೂ  ವೈದ್ಯರು ತಮ್ಮ ವೃತ್ತಿ ಸ್ವೀಕರಿಸುವ ವೇಳೆ ಮಾಡುವ ಪ್ರತಿಜ್ಞೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಕರಣ ಹೇಳಿದೆ.

ತುರ್ತು ಸಂದರ್ಭಗಳಲ್ಲೂ ಅಂಬುಲೆನ್ಸ್ ಒದಗಿಸದೇ ಇರುವ ಪ್ರಕರಣಗಳೂ ಇವೆ ಎಂದು ಹೇಳಿದ ನ್ಯಾಯಾಧೀಕರಣ, ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿ ಕಾನೂನು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಸೂಚಿಸುತ್ತದೆ.  ಕಾನೂನನ್ನು ಕಾಪಾಡಬೇಕಾದ ಸರಕಾರವೇ ಜನರ ಮೇಲೆ ದೌರ್ಜನ್ಯವೆಸಗಿದೆ ಎಂದು ನ್ಯಾಯಾಧೀಕರಣ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News