ಭಾರತದ ವಿರುದ್ಧ ಪ್ರತೀಕಾರಕ್ಕೆ ನಾವು ತುಂಬಾ ಚಿಕ್ಕವರು: ಮಲೇಶ್ಯ ಪ್ರಧಾನಿ

Update: 2020-01-20 15:46 GMT

ಲಂಕವಿ (ಮಲೇಶ್ಯ), ಜ. 20: ಭಾರತವು ಮಲೇಶ್ಯದ ತಾಳೆ ಎಣ್ಣೆ ಆಮದಿನ ಮೇಲೆ ನಿಷೇಧ ಹೇರಿರುವುದಕ್ಕೆ ಪ್ರತೀಕಾರವಾಗಿ, ಮಲೇಶ್ಯವು ಭಾರತದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆ ದೇಶದ ಪ್ರಧಾನಿ ಮಹಾತಿರ್ ಮುಹಮ್ಮದ್ ಸೋಮವಾರ ಹೇಳಿದರು.

ಜಗತ್ತಿನ ಅತಿ ದೊಡ್ಡ ಖಾದ್ಯ ತೈಲ ಆಮದು ದೇಶವಾಗಿರುವ ಭಾರತವು, ತನ್ನ ಅತಿ ದೊಡ್ಡ ಖಾದ್ಯ ತೈಲ ಪೂರೈಕೆದಾರ ಹಾಗೂ ಜಗತ್ತಿನ ಎರಡನೇ ಅತಿ ದೊಡ್ಡ ಖಾದ್ಯ ತೈಲ ಉತ್ಪಾದಕ ದೇಶವಾಗಿರುವ ಮಲೇಶ್ಯದಿಂದ ತಾಳೆಎಣ್ಣೆ ಆಮದು ಮಾಡಿಕೊಳ್ಳುವುದನ್ನು ಈ ತಿಂಗಳು ನಿಲ್ಲಿಸಿದೆ. ಭಾರತದ ಆಂತರಿಕ ನೀತಿಗಳನ್ನು ಮಹಾತಿರ್ ಮುಹಮ್ಮದ್ ಟೀಕಿಸಿರುವುದಕ್ಕೆ ಪ್ರತಿಯಾಗಿ ಭಾರತ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

‘‘ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲು ನಾವು ತುಂಬಾ ಚಿಕ್ಕವರು’’ ಎಂದು ಮಲೇಶ್ಯದ ಪಶ್ಚಿಮ ಕರಾವಳಿಯಲ್ಲಿರುವ ರಿಸಾರ್ಟ್ ದ್ವೀಪ ಲಂಕವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾತಿರ್ ಹೇಳಿದರು. ‘‘ಇದನ್ನು ನಿಭಾಯಿಸುವ ದಾರಿಗಳು ಮತ್ತು ವಿಧಾನಗಳನ್ನು ನಾವು ಕಂಡುಹಿಡಿಯಬೇಕಾಗಿದೆ’’ ಎಂದರು.

ಭಾರತದ ನೂತನ ಧರ್ಮಾಧರಿತ ಪೌರತ್ವ ಕಾನೂನನ್ನು ಮಲೇಶ್ಯದ 94 ವರ್ಷದ ಪ್ರಧಾನಿ ಟೀಕಿಸಿದ್ದರು.

ಆದರೆ, ಪೌರತ್ವ ಕಾನೂನನ್ನು ಅವರು ಸೋಮವಾರವೂ ಟೀಕಿಸಿದರು. ನೂತನ ಕಾನೂನು ‘‘ಅತ್ಯಂತ ಅನ್ಯಾಯದಿಂದ ಕೂಡಿದೆ ಎಂದು ನಾನು ಭಾವಿಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಭಾರತವು ಕಳೆದ 5 ವರ್ಷಗಳಲ್ಲಿ ಮಲೇಶ್ಯದ ಅತಿ ದೊಡ್ಡ ತಾಳೆಎಣ್ಣೆ ಮಾರುಕಟ್ಟೆಯಾಗಿತ್ತು. ಈಗ ತನ್ನ ತಾಳೆಎಣ್ಣೆಗೆ ಹೊಸ ಮಾರುಕಟ್ಟೆಗಳನ್ನು ಹುಡುಕುವುದು ಮಲೇಶ್ಯಕ್ಕೆ ದೊಡ್ಡ ಸವಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News