ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ: ಶಿವಸೇನಾ ಶಾಸಕನ ವಿರುದ್ಧ ಎಫ್‌ಐಆರ್ ದಾಖಲು

Update: 2020-01-20 15:56 GMT

ಮುಂಬೈ, ಜ.20: ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿವಸೇನೆಯ ಶಾಸಕ ಸಂಜಯ್ ಶ್ರೀಸತ್ ಹಾಗೂ ಔರಂಗಾಬಾದ್ ಉಪಮೇಯರ್ ರಾಜೇಂದ್ರ ಜಂಜಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಸ್ತೆ ದುರಸ್ತಿ ಟೆಂಡರ್ ವಿಷಯಕ್ಕೆ ಸಂಬಂಧಿಸಿ ಔರಂಗಾಬಾದ್ ಪಶ್ಚಿಮ ಕ್ಷೇತ್ರದ ಶಾಸಕ ಸಂಜಯ್ ಶ್ರೀಸತ್ ಹಾಗೂ ರಾಜೇಂದ್ರ ಜಂಜಾಲ್ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಾಜಿ ಕಾರ್ಪೊರೇಟರ್, ಶಿವಸೇನಾ ಕಾರ್ಯಕರ್ತ ಸುಶೀಲ್ ಖೇಡ್ಕರ್ ಶನಿವಾರ ದೂರು ನೀಡಿದ್ದರು.

ಔರಂಗಾಬಾದ್‌ನ ಸತಾರ ಪ್ರದೇಶದ ರಸ್ತೆ ದುರಸ್ತಿಗೆ ಸಂಬಂಧಿಸಿದ 2.25 ಕೋಟಿ ರೂ. ಮೊತ್ತದ ಟೆಂಡರ್‌ಗೆ ಬಿಡ್ ಸಲ್ಲಿಸಬಾರದು ಎಂದು ಶಾಸಕ ಸಂಜಯ್ ಹಲವು ದಿನಗಳಿಂದ ಒತ್ತಡ ಹಾಕುತ್ತಿದ್ದರು. ಆದರೆ ತಾನು ಇದಕ್ಕೆ ಕಿವಿಗೊಡಲಿಲ್ಲ. ಈ ಕಾರಣದಿಂದ ಶನಿವಾರ ತನ್ನ ಮೇಲೆ ಹಲ್ಲೆ ನಡೆಸಲಾಗಿದ್ದು ಈಗ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಖೇಡ್ಕರ್ ಹೇಳಿದ್ದಾರೆ. ಬಳಿಕ ಅವರು ವೇದಾಂತ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಆದರೆ ಹಲ್ಲೆ ಆರೋಪವನ್ನು ನಿರಾಕರಿಸಿರುವ ಶ್ರೀಸತ್ ಮತ್ತು ಜಂಜಾಲ್, ಖೇಡ್ಕರ್ ಮೇಲೆ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News