ತಂಜಾವೂರು ವಾಯುನೆಲೆಗೆ ಸುಖೋಯ್ ಯುದ್ಧವಿಮಾನ ಸೇರ್ಪಡೆ

Update: 2020-01-20 16:02 GMT

ಚೆನ್ನೈ, ಜ.20: ದೇಶದ ರಕ್ಷಣಾ ಪಡೆಗಳ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಎಂಕೆಐ ಯುದ್ಧವಿಮಾನವನ್ನು ತಮಿಳುನಾಡಿನ ತಂಜಾವೂರಿನಲ್ಲಿರುವ ವಾಯುಪಡೆ ನೆಲೆಗೆ ಸೇರ್ಪಡೆಗೊಳಿಸಲಾಗಿದೆ.

 ತಂಜಾವೂರು ವಾಯುನೆಲೆ ಸುಖೋಯ್ ಯುದ್ಧವಿಮಾನವನ್ನು ಪಡೆದ ದಕ್ಷಿಣ ವಾಯುನೆಲೆಯ ಮೊದಲ ಕೇಂದ್ರವಾಗಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಏರ್‌ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಉಪಸ್ಥಿತರಿದ್ದರು. ಅತ್ಯಂತ ಆಯಕಟ್ಟಿನ ರಕ್ಷಣಾ ನೆಲೆಯಾಗಿರುವ ತಂಜಾವೂರು ವಾಯುನೆಲೆಯಲ್ಲಿ ನಿಯೋಜಿಸಲಾಗಿರುವ ಸುಖೋಯ್‌ಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಜೋಡಿಸಲಾಗಿದೆ.

ಆರಂಭದಲ್ಲಿ ತಂಜಾವೂರು ವಾಯುನೆಲೆಯಲ್ಲಿ 6 ಯುದ್ಧವಿಮಾನ ನಿಯೋಜಿಸಲಾಗುತ್ತಿದ್ದು ಮುಂದಿನ ಹಂತದಲ್ಲಿ ಸಂಪೂರ್ಣ ಬಲವಾದ 18 ವಿಮಾನಗಳನ್ನು ವಾಯುನೆಲೆ ಹೊಂದಲಿದೆ ಎಂದು ವಾಯುಪಡೆಯ ಚೀಫ್ ಏರ್‌ಮಾರ್ಷಲ್ ಆರ್‌ಕೆಎಸ್ ಬಧೌರಿಯಾ ಹೇಳಿದ್ದಾರೆ. ಹಿಂದೂ ಮಹಾಸಾಗರ ವಲಯದಲ್ಲಿ ಕಾವಲು ಕಾಯುವ ಜೊತೆಗೆ ಆಗಸದಲ್ಲಿ ಮತ್ತು ಸಮುದ್ರದ ಮೇಲಿಂದ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಸುಖೋಯ್-30 ಯುದ್ಧವಿಮಾನ ಹೊಂದಿದೆ. ಸುಮಾರು 300 ಕಿ.ಮೀ ದೂರವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಹೊಂದಿರುವ ಸುಖೋಯ್ ವಿಮಾನ ಹಿಂದೂ ಮಹಾಸಾಗರದಲ್ಲಿ ಅತ್ಯಂತ ದೂರವಿರುವ ಗುರಿಯ ಮೇಲೂ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

 ಮೂರು ಖಂಡಗಳ ಗಡಿಯುದ್ದಕ್ಕೂ ಚಾಚಿಕೊಂಡಿರುವ ಹಿಂದೂ ಮಹಾಸಾಗರ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಇಲ್ಲಿ ತಿರುವನಂತಪುರಂ ವಾಯುನೆಲೆ ಮಹತ್ವದ ಕೆಲಸ ನಿರ್ವಹಿಸುತ್ತಿದೆ. ಸುಖೋಯ್ ಯುದ್ಧವಿಮಾನಗಳನ್ನು 222 ಟೈಗರ್ ಶಾರ್ಕ್ಸ್ ಸ್ಕ್ವಾಡ್ರನ್ ನಿರ್ವಹಿಸಲಿದೆ. 1971ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಪಂಜಾಬ್‌ನ ಹಲ್ವಾರಾ ವಾಯುನೆಲೆಯ ಮೂಲಕ ಟೈಗರ್ ಶಾರ್ಕ್ಸ್ ತುಕಡಿ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News