ವಿಮಾನ ಪತನ : 11 ಯುಕ್ರೇನ್ ಪ್ರಜೆಗಳ ಪಾರ್ಥಿವ ಶರೀರ ಸ್ವದೇಶಕ್ಕೆ ಆಗಮನ

Update: 2020-01-20 16:26 GMT

ಕೀವ್ (ಯುಕ್ರೇನ್), ಜ. 20: ಇತ್ತೀಚೆಗೆ ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದ ಯುಕ್ರೇನ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 11 ಯುಕ್ರೇನ್ ಪ್ರಜೆಗಳ ಪಾರ್ಥಿವ ಶರೀರವು ರವಿವಾರ ರಾಜಧಾನಿ ಕೀವ್ ತಲುಪಿವೆ.

ಕೀವ್‌ನ ಬೊರಿಸ್ಪಿಲ್ ವಿಮಾನ ನಿಲ್ದಾಣಕ್ಕೆ 9 ವಿಮಾನ ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರ ಪಾರ್ಥಿವ ಶರೀರಗಳು ಬಂದಾಗ ವಿಮಾನ ನಿಲ್ದಾಣದಲ್ಲಿ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಪ್ರಧಾನಿ ಒಲೆಕ್ಸಿಯ್ ಗೊಂಚರುಕ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಯುಕ್ರೇನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ಸಿಬ್ಬಂದಿ ತಮ್ಮ ಮೃತ ಸಹೋದ್ಯೋಗಿಗಳನ್ನು ಕಣ್ಣೀರಧಾರೆಯೊಂದಿಗೆ ಕೈಯಲ್ಲಿ ಹೂಗುಚ್ಛಗಳನ್ನು ಹಿಡಿದುಕೊಂಡ ಸ್ವಾಗತಿಸಿದರು.

ಜನವರಿ 8ರಂದು ಇರಾನ್ ರಾಜಧಾನಿ ಟೆಹರಾನ್‌ನಿಂದ ಕೀವ್‌ಗೆ ಹಾರಾಟ ಆರಂಭಿಸಿದ ಬೋಯಿಂಗ್ 737 ವಿಮಾನವು ಕೆಲವೇ ಕ್ಷಣಗಳಲ್ಲಿ ಟೆಹರಾನ್ ಹೊರವಲಯದಲ್ಲಿ ಪತನಗೊಂಡಿತು. ವಿಮಾನವನ್ನು ಶತ್ರು ಕ್ಷಿಪಣಿ ಎಂದು ತಪ್ಪಾಗಿ ಭಾವಿಸಿ ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್‌ನ ಸೈನಿಕರು ಕಿರು ವ್ಯಾಪ್ತಿಯ ಕ್ಷಿಪಣಿ ಮೂಲಕ ಹೊಡೆದುರುಳಿಸಿದರು ಎಂದು ಕೆಲವು ದಿನಗಳ ಬಳಿಕ ಇರಾನ್ ತಪ್ಪೊಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News