ಜಗತ್ತಿನ 2,153 ಶ್ರೀಮಂತರ ಬಳಿ 460 ಕೋಟಿ ಜನರಿಗಿಂತ ಹೆಚ್ಚು ಹಣ : ಆಕ್ಸ್‌ಫಾಮ್ ವರದಿ

Update: 2020-01-20 16:31 GMT

ನೈರೋಬಿ (ಕೆನ್ಯ), ಜ. 20: 2019ರಲ್ಲಿ ಜಗತ್ತಿನ ಅತಿ ಶ್ರೀಮಂತ 2,153 ಮಂದಿ ಅತಿ ಬಡವ 460 ಕೋಟಿ ಜನರು ಹೊಂದಿರುವ ಒಟ್ಟು ಹಣಕ್ಕಿಂತ ಹೆಚ್ಚಿನ ಹಣವನ್ನು ಹೊಂದಿದ್ದಾರೆ. ಅದೇ ವೇಳೆ, ಮಹಿಳೆಯರು ಮತ್ತು ಬಾಲಕಿಯರು ಮಾಡುವ ವೇತನವಿಲ್ಲದ ಅಥವಾ ಕಡಿಮೆ ವೇತನದ ಕೆಲಸವು ಪ್ರತಿ ವರ್ಷ ಜಾಗತಿಕ ಆರ್ಥಿಕತೆಗೆ ತಂತ್ರಜ್ಞಾನ ಉದ್ದಿಮೆಗಿಂತ ಮೂರು ಪಟ್ಟು ಹೆಚ್ಚಿನ ದೇಣಿಗೆಯನ್ನು ನೀಡುತ್ತಿದೆ ಎಂದು ‘ಆಕ್ಸ್‌ಫಾಮ್’ ಸಂಸ್ಥೆ ಸೋಮವಾರ ಹೇಳಿದೆ.

ಜಗತ್ತಿನಾದ್ಯಂತವಿರುವ ಮಹಿಳೆಯರು ಪ್ರತಿ ದಿನ ವೇತನ ಅಥವಾ ಮಾನ್ಯತೆಯಿಲ್ಲದೆ ಒಟ್ಟು 1,250 ಕೋಟಿ ಗಂಟೆ ಕೆಲಸ ಮಾಡುತ್ತಿದ್ದಾರೆ ಎಂದು ಕೆನ್ಯ ರಾಜಧಾನಿ ನೈರೋಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ದತ್ತಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಸ್ವಿಟ್ಸರ್‌ಲ್ಯಾಂಡ್‌ನ ಡಾವೋಸ್‌ನಲ್ಲಿ ನಡೆಯಲಿರುವ ಜಾಗತಿಕ ರಾಜಕೀಯ ಮತ್ತು ಉದ್ಯಮ ನಾಯಕರ ವಾರ್ಷಿಕ ಜಾಗತಿಕ ಆರ್ಥಿಕ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಈ ವರದಿ ಬಿಡುಗಡೆಯಾಗಿದೆ.

ಮಹಿಳೆಯರು ಮಾಡುವ ವೇತನರಹಿತ ಕಾಳಜಿ ಕೆಲಸವು ಜಾಗತಿಕ ಆರ್ಥಿಕತೆಗೆ ಪ್ರತಿ ವರ್ಷ ಕನಿಷ್ಠ 10.8 ಟ್ರಿಲಿಯ ಡಾಲರ್ (ಸುಮಾರು 760 ಲಕ್ಷ ಕೋಟಿ ರೂಪಾಯಿ)ನಷ್ಟು ಮೌಲ್ಯದ ದೇಣಿಗೆಯನ್ನು ನೀಡುತ್ತಿದೆ ಹಾಗೂ ಇದು ತಂತ್ರಜ್ಞಾನ ಉದ್ದಿಮೆ ನೀಡುವ ದೇಣಿಗೆಗಿಂತ ಮೂರು ಪಟ್ಟು ಅಧಿಕವಾಗಿದೆ ಎಂದು ತನ್ನ ‘ಟೈಮ್ ಟು ಕೇರ್’ ವರದಿಯಲ್ಲಿ ಆಕ್ಸ್‌ಫಾಮ್ ತಿಳಿಸಿದೆ.

 ‘‘ನಾವು ನೋಡುತ್ತಿರುವ ಆರ್ಥಿಕತೆಯ ಹಿಂದಿರುವ ಹಾಗೂ ನಮ್ಮ ಕಣ್ಣಿಗೆ ಕಾಣದ ಇಂಜಿನ್ ಈ ಮಹಿಳೆಯರು ಮಾಡುವ ವೇತನರಹಿತ ಕಾಳಜಿ ಕೆಲಸವಾಗಿದೆ ಎನ್ನುವುದನ್ನು ನಾವು ಅರಿಯುವುದು ಅಗತ್ಯವಾಗಿದೆ. ಹಾಗೂ ಅದು ಬದಲಾಗಬೇಕಾಗಿದೆ’’ ಎಂದು ಆಕ್ಸ್‌ಫಾಮ್ ಇಂಡಿಯದ ಸಿಇಒ ಅಮಿತಾಭ್ ಬೆಹಾರ್ ಸಂದರ್ಶನವೊಂದರಲ್ಲಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News