ಜಮ್ಮು-ಕಾಶ್ಮೀರದಲ್ಲಿ ‘ಔಟ್‌ರೀಚ್’ ಕಾರ್ಯಕ್ರಮ : ಕಾಶ್ಮೀರಕ್ಕೆ ಭೇಟಿ ನೀಡಲಿರುವ ಕೇವಲ ಐವರು ಕೇಂದ್ರ ಸಚಿವರು

Update: 2020-01-20 16:58 GMT

ಶ್ರೀನಗರ,ಜ.20: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಜನರಲ್ಲಿ ವಿಧಿ 370ರ ರದ್ದತಿಯ ಧನಾತ್ಮಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸರಕಾರವು ಆರಂಭಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರವು ಹಮ್ಮಿಕೊಂಡಿರುವ ‘ಔಟ್ ರೀಚ್’ ಕಾರ್ಯಕ್ರಮದ ಅಂಗವಾಗಿ 36 ಕೇಂದ್ರ ಸಚಿವರ ಪೈಕಿ ಕೇವಲ ಐವರು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್,ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ್, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ,ಸಹಾಯಕ ರಕ್ಷಣಾ ಸಚಿವ ಶ್ರೀಪಾದ ನಾಯ್ಕ್ ಮತ್ತು ಸಹಾಯಕ ಗೃಹಸಚಿವ ಜಿ.ಕಿಶನ ರೆಡ್ಡಿ ಅವರು ಮುಂದಿನ ನಾಲ್ಕು ದಿನಗಳಲ್ಲಿ ಕಾಶ್ಮೀರ ಕಣಿವೆಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಇಲ್ಲಿ ತಿಳಿಸಿದರು.

ನಖ್ವಿ ಅವರು ಮಂಗಳವಾರ ಶ್ರೀನಗರದ ಹೊರವಲಯದ ದಾರಾ ಪ್ರದೇಶದಲ್ಲಿ ಪ್ರೌಢಶಾಲೆಯೊಂದಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಔಟ್‌ರೀಚ್ ಕಾರ್ಯಕ್ರಮದ ಕಾಶ್ಮೀರ ಸುತ್ತಿಗೆ ಚಾಲನೆ ನೀಡಲಿದ್ದಾರೆ. ರೆಡ್ಡಿ ಬುಧವಾರದಿಂದ ಎರಡು ದಿನಗಳ ಕಾಲ ಗಂಡೇರಬಾಲ್ ಜಿಲ್ಲೆಯಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದರೆ,ಪ್ರಸಾದ ಅವರು ಗುರುವಾರದಿಂದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದ್ದಾರೆ. ನಾಯ್ಕ್ ಅವರು ಗುರುವಾರ ಮತ್ತು ಪೋಖ್ರಿಯಾಲ್ ಅವರು ಶುಕ್ರವಾರ ಶ್ರೀನಗರದಲ್ಲಿರಲಿದ್ದಾರೆ.

ಮುಂದಿನ ನಾಲ್ಕು ದಿನಗಳಲ್ಲಿ ಕಾಶ್ಮೀರದಲ್ಲಿ ಕೇವಲ ಎಂಟು ಸಭೆಗಳನ್ನು ನಿಗದಿಗೊಳಿಸಿದ್ದು, ಇಂತಹ 50ಕ್ಕೂ ಅಧಿಕ ಸಭೆಗಳು ಮತ್ತು ಕಾರ್ಯಕ್ರಮಗಳು ಜಮ್ಮು ವಿಭಾಗದಲ್ಲಿ ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಉಗ್ರರ ಹಾವಳಿ ಹೆಚ್ಚಾಗಿರುವ ದ.ಕಾಶ್ಮೀರದ ಪುಲ್ವಾಮಾ,ಶೋಪಿಯಾನ್,ಅನಂತನಾಗ್ ಮತ್ತು ಕುಲ್ಗಾಮ್ ಜಿಲ್ಲೆಗಳಿಗೆ ಯಾವುದೇ ಸಚಿವರು ಭೇಟಿ ನೀಡುತ್ತಿಲ್ಲ. ಬಡ್ಗಾಮ್,ಕುಪ್ವಾರಾ ಮತ್ತು ಬಂಡಿಪೋರಾ ಜಿಲ್ಲೆಗಳೂ ಸಚಿವರ ಭೇಟಿ ಪಟ್ಟಿಯಲ್ಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News