ನಿರ್ಭಯಾ ಅತ್ಯಾಚಾರ ಪ್ರಕರಣ: ಪವನ್ ಗುಪ್ತಾ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2020-01-20 17:07 GMT

ಹೊಸದಿಲ್ಲಿ, ಜ. 20: 2012ರಲ್ಲಿ ಘಟನೆ ನಡೆದ ಸಂದರ್ಭ ತಾನು ಅಪ್ರಾಪ್ತನಾಗಿದ್ದೆ ಎಂಬ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿ ಪವನ್ ಗುಪ್ತಾನ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಇದರೊಂದಿಗೆ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಾಲ್ವರಿಗೂ ಗಲ್ಲು ಶಿಕ್ಷೆ ಖಾಯಂ ಆದಂತಾಗಿದೆ. ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ದೋಷಿಗಳಲ್ಲಿ ಓರ್ವನಾಗಿರುವ ಗುಪ್ತಾನ ಈ ಪ್ರತಿಪಾದನೆಯನ್ನು ಈ ಹಿಂದೆ ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು ಹಾಗೂ ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವುದಕ್ಕಾಗಿ ಆತನ ವಕೀಲ ಎ.ಪಿ ಸಿಂಗ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ತನ್ನ ಪ್ರತಿಪಾದನೆಯನ್ನು ಉಚ್ಚ ನ್ಯಾಯಾಲಯ ತಿರಿಸ್ಕರಿಸಿದ ಹಿನ್ನೆಲೆಯಲ್ಲಿ ಗುಪ್ತಾ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾನೆ.

ಗುಪ್ತಾನ ಅಪ್ರಾಪ್ತತೆಯ ಬಗೆಗಿನ ಸಾಕ್ಷಗಳನ್ನು ಸರಕಾರ ಮರೆಮಾಚಿದೆ. ಇದು ಅತಿ ದೊಡ್ಡ ಪಿತೂರಿಯಾಗಿದೆ ಎಂದು ಗುಪ್ತಾ ಪರ ವಕೀಲ ಎ.ಪಿ. ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ. ಶಾಲೆಯ ಪ್ರಮಾಣ ಪತ್ರದಲ್ಲಿ ಗುಪ್ತಾನ ಜನನ ವರ್ಷ 1996 ಎಂದು ಹೇಳಲಾಗಿದೆ. ಉಚ್ಚ ನ್ಯಾಯಾಲಯ ವಿಚಾರಣೆಯನ್ನು ತರಾತುರಿಯಿಂದ ನಡೆಸಿರುವುದರಿಂದ ಈ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ, 2017ರಲ್ಲಿ ಗುಪ್ತಾ ಜನನ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದ. ಆದರೆ, ಅದಾಗಲೇ ಆತನನನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿತ್ತು. ಆತ ಕೆಳ ನ್ಯಾಯಾಲಯದಲ್ಲಿ ಕೂಡ ಇದೇ ಪ್ರತಿಪಾದನೆ ಮಾಡಿದ್ದಾನೆ. ಆದರೆ, ಆತನ ಪ್ರತಿಪಾದನೆಯನ್ನು ಕೆಳ ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ಪೀಠ ಹೇಳಿದೆ. ಗುಪ್ತಾನ ಆತಂಕ ಹಾಗೂ ಆತ ಉಲ್ಲೇಖಿಸಿರುವ ಸಾಕ್ಷಗಳು ಈಗಾಗಲೇ ಪರಿಶೀಲಿಸಲಾಗಿದೆ ಹಾಗೂ ತಿರಸ್ಕರಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

ಅಪರಾಧ ನಡೆಯುವ ಸಂದರ್ಭ ಗುಪ್ತಾ ಅಪ್ರಾಪ್ತನಾಗಿರಲಿಲ್ಲ ಎಂಬುದನ್ನು ವಿಚಾರಣಾ ನ್ಯಾಯಾಲಯ ಸ್ಪಷ್ಟವಾಗಿ ಹೇಳಿವೆ. ಅಪ್ರಾಪ್ತತೆಯ ಬಗ್ಗೆ ಒರ್ವ ಯಾವಾಗ ಕೂಡ ಮನವಿ ಸಲ್ಲಿಸಬಹುದು. ಆದರೆ, ಮನವಿ ತಿರಸ್ಕೃತವಾದ ಬಳಿಕ ಮತ್ತೆ ಮತ್ತೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಮೇಹ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News