ಸಿಎಎ ಮಂಜೂರು ಮಾಡುವಾಗ ಮೋದಿ ಸರಕಾರ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ತರುಣ್ ಗೊಗೋಯಿ

Update: 2020-01-20 17:11 GMT

ಗುವಾಹತಿ, ಜ. 20: ಪೌರತ್ವ ತಿದ್ದುಪಡಿ ಕಾಯ್ದೆ ಮಂಜೂರು ಮಾಡುವ ಮುನ್ನ ನರೇಂದ್ರ ಮೋದಿ ಸರಕಾರ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ತರುಣ್ ಗೊಗೋಯಿ ಸೋಮವಾರ ಹೇಳಿದ್ದಾರೆ.

‘‘ಭಾರತ ರಾಜ್ಯಗಳ ಒಕ್ಕೂಟ. ನೀವು (ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರ) ರಾಜ್ಯಗಳಿಗೆ ಗೌರವ ನೀಡಬೇಕು. ಪ್ರಧಾನಿ ಮೋದಿ ಅವರು ಟೀಮ್ ಇಂಡಿಯಾ ಎಂದು ಮಾತನಾಡುತ್ತಿರುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅದನ್ನು ಅನುಸರಿಸಬೇಕು. ಕೇವಲ ಕಾನೂನು ಮಂಜೂರು ಮಾಡಿದರೆ ಸಾಲದು’’ ಎಂದು ಅವರು ಹೇಳಿದ್ದಾರೆ.

ಈ ಪ್ರಕ್ರಿಯೆಯ ಕುರಿತು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ್ದರೆ, ರಾಜ್ಯಗಳು ಕಾನೂನನ್ನು ಬಹಿಷ್ಕರಿಸುತ್ತಿರಲಿಲ್ಲ ಹಾಗೂ ತಾವು ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳುತ್ತಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು. ಮಾನವೀಯ ನೆಲೆಯಲ್ಲಿ ಕೆಲವು ಜನರಿಗೆ ಆಶ್ರಯ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಇರಲಿಲ್ಲ ಎಂದು ಅವರು ತಿಳಿಸಿದರು. ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯದ ಪ್ರಕರಣಗಳು ಇಲ್ಲ. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಹೇಳಿಕೆಗಳು ಇದನ್ನು ಸಾಬೀತುಪಡಿಸಿವೆ ಎಂದು ತರುಣ್ ಗೊಗೋಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News