ಎನ್‌ಪಿಆರ್ ಅಪಾಯಕಾರಿ ಆಟ: ಮಮತಾ ಬ್ಯಾನರ್ಜಿ

Update: 2020-01-20 17:23 GMT

ಕೋಲ್ಕತ್ತಾ, ಜ. 20: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮುನ್ನ ಎನ್‌ಪಿಆರ್ ಅರ್ಜಿಯಲ್ಲಿ ಉಲ್ಲೇಖಿಸಲಾದ ಕಲಂಗಳನ್ನು ಗಮನಕ್ಕೆ ತೆಗೆದುಕೊಳ್ಳಿ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಈಶಾನ್ಯ ಹಾಗೂ ಬಿಜೆಪಿಯೇತರ ರಾಜ್ಯಗಳ ಸಹೋದ್ಯೋಗಿಗಳಲ್ಲಿ ಸೋಮವಾರ ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅಪಾಯಕಾರಿ ಆಟ ಎಂದು ಹೇಳಿದ ಅವರು, ಹೆತ್ತವರ ಜನನ ವಿವರ ಕೋರುವ ಅರ್ಜಿ ಏನೂ ಅಲ್ಲದಿರಬಹುದು. ಆದರೆ, ಅದು ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನದ ಮುನ್ಸೂಚಕ ಎಂದರು.

‘‘ಕಾನೂನನ್ನು ಸರಿಯಾಗಿ ಓದಬೇಕು ಹಾಗೂ ನಿರ್ಧಾರಕ್ಕೆ ಬರುವ ಮುನ್ನ ಎನ್‌ಪಿಆರ್‌ನ ಕಲಂಗಳನ್ನು ಪರಿಶೀಲಿಸಬೇಕು ಎಂದು ನಾನು ಬಿಜೆಪಿ ಆಡಳಿತ ಇರುವ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅಸ್ಸಾಂ, ಮಣಿಪುರ, ಹಿಮಾಚಲಪ್ರದೇಶ ಹಾಗೂ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳು ಸೇರಿದಂತೆ ಎಲ್ಲ ರಾಜ್ಯಗಳು ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ’’ ಎಂದು ಅವರು ಹೇಳಿದರು.

ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಆದುದರಿಂದ ಈ ವಿಷಯದಲ್ಲಿ ಪಾಲ್ಗೊಳ್ಳದಿರಿ ಎಂದು ನಾನು ಮನವಿ ಮಾಡಿದ್ದೇನೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪಶ್ಚಿಮಬಂಗಾಳದ ವಿಧಾನಸಭೆ ಶೀಘ್ರದಲ್ಲಿ ನಿರ್ಣಯ ಅಂಗೀಕರಿಸಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅರ್ಜಿಯಲ್ಲಿ ಹೆತ್ತವರ ಜನನ ವಿವರಗಳು ಕಡ್ಡಾಯವಲ್ಲ ಎಂದು ಮಾದ್ಯಮದಲ್ಲಿ ಪ್ರಕಟವಾದ ಸುದ್ದಿಯಿಂದ ಅರಿತುಕೊಂಡೆ. ಇದು ಕಡ್ಡಾಯವಲ್ಲದೇ ಇದ್ದರೆ, ಅರ್ಜಿಯ ಭಾಗವಾಗಿರುವುದು ಏಕೆ ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News