ಟ್ವೆಂಟಿ-20 ಮಹಿಳಾ ವಿಶ್ವಕಪ್‌: ಪಾಕ್ ತಂಡ ಪ್ರಕಟ

Update: 2020-01-20 18:06 GMT

ಕರಾಚಿ, ಜ. 20: ಟ್ವೆಂಟಿ-20 ಮಹಿಳಾ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಪ್ರಕಟಗೊಂಡಿದ್ದು, ಆಯ್ಕೆ ಸಮಿತಿಯು ಮಾಜಿ ನಾಯಕಿ ಸನಾ ಮಿರ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿಲ್ಲ.

  ಅಂತರ್‌ರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಯಲ್ಲಿ ನೀಡಿರುವ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಮಹಿಳೆಯರ ಟ್ವೆಂಟಿ- 20 ವಿಶ್ವಕಪ್‌ಗೆ ಮಾಜಿ ನಾಯಕಿ ಮತ್ತು ಹಿರಿಯ ಆಫ್ ಸ್ಪಿನ್ನರ್ ಸನಾ ಮಿರ್ ಅವರನ್ನು ಪಾಕಿಸ್ತಾನದ 15 ಮಂದಿ ಸದಸ್ಯರ ತಂಡದಿಂದ ಮಹಿಳಾ ತಂಡದ ಆಯ್ಕೆ ಸಮಿತಿಯು ಸೇರಿಸಿಕೊಂಡಿಲ್ಲ.

   ಆಯ್ಕೆ ಸಮಿತಿಯ ಮುಖ್ಯಸ್ಥೆ ಉರೂಜ್ ಮುಮ್ತಾಝ್ ಅವರು ಸನಾ ಅವರನ್ನು ಕೈಬಿಡುವುದು ಕಠಿಣ. ಆದರೆ ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಇತ್ತೀಚಿನ ಪ್ರದರ್ಶನಗಳು ಅಷ್ಟಾಗಿ ಇಲ್ಲ ಈ ಕಾರಣದಿಂದಾಗಿ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಿದರು.

 15 ವರ್ಷದ ಆಯೆಷಾ ನಸೀಮ್ ಮತ್ತು 16 ವರ್ಷದ ಅರೂಬ್ ಷಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಉರೂಜ್ ಮಾಹಿತಿ ನೀಡಿದರು.

ಐಸಿಸಿ 50 ಓವರ್ ಮತ್ತು ಟ್ವೆಂಟಿ 20 ವಿಶ್ವಕಪ್ ಎರಡರಲ್ಲೂ ಪಾಕಿಸ್ತಾನದ ನಾಯಕತ್ವ ವಹಿಸಿದ್ದ 34ರ ಹರೆಯದ ಸನಾ 120 ಏಕದಿನ ಮತ್ತು 102 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

  ವಿಶ್ವ ಟ್ವೆಂಟಿ-20ಗೆ ಆಯ್ಕೆ ಪ್ರಕ್ರಿಯೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ನಡೆಸಿದ ತ್ರಿಕೋನ ಸರಣಿಯಲ್ಲಿ ಆಫ್ ಸ್ಪಿನ್ನರ್ ಸನಾ ಭಾಗವಹಿಸಿದ್ದರು. 2005 ರಲ್ಲಿ ಪಾದಾರ್ಪಣೆ ಮಾಡಿದ ನಂತರ ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 240 ಅಂತರ್‌ರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.

     ಅಕ್ಟೋಬರ್-ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸ್ವದೇಶದಲ್ಲಿ ನಡೆದ ಏಕದಿನ ಮತ್ತು ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸುವ ಮೂಲಕ ಪಾಕಿಸ್ತಾನದ ಪರ ಗರಿಷ್ಠ ಪಂದ್ಯಗಳನ್ನು ಆಡಿದ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದರು. ಆದರೆ, ನಂತರ ಡಿಸೆಂಬರ್‌ನಲ್ಲಿ ಮಲೇಷ್ಯಾದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ದೂರ ಸರಿದಿದ್ದರು. ನಾಯಕಿ ಬಿಸ್ಮಾ ಮರೂಫ್ ಅವರು ತಂಡದಲ್ಲಿ ಸನಾ ಅವರನ್ನು ಬಯಸಿದ್ದರು. ಆದರೆ ಬಹುಮತದ ನಿರ್ಧಾರವನ್ನು ಗೌರವಿಸಬೇಕಾಗಿದೆ ಎಂದು ಹೇಳಿದರು.

 ಆಯ್ಕೆ ಸಮಿತಿಯು ಮುನೀಬಾ ಅಲಿ ಮತ್ತು ಐಮೆನ್ ಅನ್ವರ್ ತಂಡಕ್ಕೆ ಮರಳಿದ್ದಾರೆ. ಮುನೀಬಾ ಕೊನೆಯ ಬಾರಿಗೆ 2018ರ ನವೆಂಬರ್‌ನಲ್ಲಿ ಪಾಕಿಸ್ತಾನದ ಪರ ಆಡಿದ್ದರು.

 ಕರಾಚಿಯಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಮುನೀಬಾ 1 ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದರು.

ಪಾಕಿಸ್ತಾನ ಮಹಿಳೆಯರು ಜನವರಿ 31ರಂದು ಆಸ್ಟ್ರೇಲಿಯಕ್ಕೆ ತೆರಳಲಿದ್ದು, ಫೆಬ್ರವರಿ 7, 9 ಮತ್ತು 11ರಂದು ವೆಸ್ಟ್ ಇಂಡೀಸ್ ವಿರುದ್ಧ ಮೂರು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ.

<ತಂಡ: ಬಿಸ್ಮಾ ಮರೂಫ್(ನಾಯಕಿ) , ಐಮೆನ್ ಅನ್ವರ್, ಅಲಿಯಾ ರಿಯಾಝ್, ಅನಮ್ ಅಮೀನ್, ಆಯೇಷಾ ನಸೀಮ್, ಡಯಾನಾ ಬೇಗ್ ಫಾತಿಮಾ ಸನಾ, ಇರಾಮ್ ಜಾವೇದ್, ಜಾವೇರಿಯಾ ಖಾನ್, ಮುನೀಬಾ ಅಲಿ, ನಿದಾ ದಾರ್, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್, ಸಿದ್ರಾ ನವಾಝ್ (ವಿಕೆಟ್ ಕೀಪರ್), ಸೈಯದ್ ಅರೂಬ್ ಶಾ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News