ಸಿಎಂ ಜಗನ್ ಭಾಷಣಕ್ಕೆ ಅಡ್ಡಿಪಡಿಸಿದ 17 ಟಿಡಿಪಿ ಶಾಸಕರು ಆಂಧ್ರ ವಿಧಾನಸಭೆಯಿಂದ ಅಮಾನತು

Update: 2020-01-21 04:35 GMT

ಹೈದರಾಬಾದ್, ಜ.21: ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಅಭಿವೃದ್ಧಿ  ಮಸೂದೆ ಮಂಡನೆಯ ವೇಳೆ  ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಭಾಷಣಕ್ಕೆ  ಅಡ್ಡಿಪಡಿಸಿದ ಕಾರಣ ಪ್ರತಿಪಕ್ಷ ಟಿಡಿಪಿಯ 17 ಶಾಸಕರನ್ನು ಆಂಧ್ರಪ್ರದೇಶ ವಿಧಾನಸಭೆಯಿಂದ ಸೋಮವಾರ ಅಮಾನತುಗೊಳಿಸಲಾಗಿದೆ.

ಜಗನ್ ಸರ್ಕಾರ ಮಸೂದೆಯನ್ನು ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಇತರ ಕೆಲವು ಪಕ್ಷದ ಮುಖಂಡರು ವಿಧಾನಸಭೆಯ ಹೊರಗೆ ಮೌನ ಪ್ರತಿಭಟನೆ ನಡೆಸಿದರು.

“ಒಂದು ರಾಜ್ಯಕ್ಕೆ ಜಗತ್ತಿನಲ್ಲಿ ಎಲ್ಲಿಯೂ ಮೂರು ರಾಜಧಾನಿಗಳಿಲ್ಲ. ಇಂದು ಕಪ್ಪು ದಿನ, ನಾವು ಅಮರಾವತಿ ಮತ್ತು ಆಂಧ್ರಪ್ರದೇಶವನ್ನು ಉಳಿಸಲು ಬಯಸಿದ್ದೇವೆ. ನಾನು ಮಾತ್ರವಲ್ಲ, ರಾಜ್ಯದಾದ್ಯಂತ ಜನರು  ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಎಲ್ಲರನ್ನೂ ಬಂಧಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ ”ಎಂದು ನಾಯ್ಡು ಹೇಳಿದರು.

ರಾಜ್ಯವು ಈಗ ಅಮರಾವತಿ, ವಿಶಾಖಪಟ್ಟಣಂ ಮತ್ತು ಕರ್ನೂಲ್ ಎಂಬ ಮೂರು ರಾಜಧಾನಿಗಳನ್ನು ಹೊಂದಿರುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಅಮರಾವತಿ ಶಾಸಕಾಂಗ ರಾಜಧಾನಿಯಾಗಲಿದ್ದು, ‘ಶಾಸಕಾಂಗದ ಸ್ಥಾನ’ ರಾಜ ಭವನ, ಕಾರ್ಯದರ್ಶಿಗಳು ಮತ್ತು ಸರ್ಕಾರಿ ಇಲಾಖೆಗಳ ಮುಖ್ಯಸ್ಥರ ಕಚೇರಿಗಳು ವಿಶಾಖಪಟ್ಟಣಂನಲ್ಲಿ ಇರಲಿವೆ. ಕರ್ನೂಲ್  ನ್ಯಾಯಾಂಗ ರಾಜಧಾನಿಯಾಗಿರುತ್ತದೆ ಮತ್ತು ಹೈಕೋರ್ಟ್‌ ಅಲ್ಲಿರುತ್ತದೆ ಎಂದು ಮಸೂದೆ  ಹೇಳುತ್ತದೆ.

ಆಂಧ್ರಪ್ರದೇಶ ಮೆಟ್ರೋಪಾಲಿಟನ್ ಪ್ರದೇಶ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2016 ರ ನಿಬಂಧನೆಗಳ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳಿಂದ ಈ ಮೂರು ಪ್ರದೇಶಗಳನ್ನು ನಿರ್ಬಂಧಿಸಲಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News