ಮತ್ತೊಂದು ಮಾರಣಾಂತಿಕ ವೈರಸ್ ಆತಂಕ: ತುರ್ತು ಸಭೆ ಕರೆದ ವಿಶ್ವ ಆರೋಗ್ಯ ಸಂಸ್ಥೆ

Update: 2020-01-21 13:45 GMT

ಬೀಜಿಂಗ್, ಜ.21: ಚೀನಾದಲ್ಲಿ ತ್ವರಿತವಾಗಿ ಹರಡುತ್ತಿರುವ ಮಾರಣಾಂತಿಕ ನೊವೆಲ್ ಕೊರೊನ ವೈರಸ್‌ಗೆ ಬಲಿಯಾದವರ ಸಂಖ್ಯೆ 4ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಚೀನಾದಲ್ಲಿ ಆತಂಕ ಮೂಡಿಸಿರುವ ನಿಗೂಢ ಕೊರೊನ ವೈರಸ್ ಅನ್ನು ‘ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಆಪತ್ತು’ ಎಂದು ಘೋಷಿಸುವ ಬಗ್ಗೆ ನಿರ್ಧರಿಸಲು ಬುಧವಾರ (ಜ.22ರಂದು) ತುರ್ತು ಸಭೆ ಕರೆದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಚೀನಾದ ಬೀಜಿಂಗ್, ಶಾಂಘೈ ಹಾಗೂ ಇತರ ಪ್ರದೇಶಗಳಲ್ಲಿ 220ಕ್ಕೂ ಹೆಚ್ಚು ಮಂದಿ ಈ ಮಾರಕ ವೈರಸ್‌ನ ಸೋಂಕಿಗೆ ಒಳಗಾಗಿದ್ದರೆ ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲಿ ಐದು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ . ಜಪಾನ್‌ನಲ್ಲಿ ಒಂದು, ಥೈಲ್ಯಾಂಡ್‌ನಲ್ಲಿ ಎರಡು ಮತ್ತು ಹಾಂಗ್‌ಕಾಂಗ್‌ನಲ್ಲಿ 106 ಶಂಕಿತ ಪ್ರಕರಣ ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೀವ್ರ ಮತ್ತು ತೀಕ್ಷ್ಣ ಉಸಿರಾಟದ ತೊಂದರೆಯ ಲಕ್ಷಣವಿರುವ ‘ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್(ಸಾರ್ಸ್)’ ರೋಗಕ್ಕೆ ಸಂಬಂಧಿಸಿದ ಕೊರೊನ ವೈರಸ್‌ನ ಲಕ್ಷಣ ಮೊತ್ತಮೊದಲು ಚೀನಾದ ಕೇಂದ್ರಭಾಗದಲ್ಲಿರುವ ವುಹಾನ್ ನಗರದಲ್ಲಿ ಪತ್ತೆಯಾಗಿತ್ತು. ಜನವರಿ 10ರಿಂದ ಫೆಬ್ರವರಿ 20ರ ಅವಧಿಯಲ್ಲಿ ಚೀನಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ 3 ಬಿಲಿಯನ್‌ಗೂ ಅಧಿಕ ವಾಹನಗಳಲ್ಲಿ ಜನರು ಚೀನಾಕ್ಕೆ ಭೇಟಿ ನೀಡಿ ಮರಳುತ್ತಾರೆ. ಕಾಕತಾಳೀಯವೆಂಬಂತೆ ಇದೇ ಅವಧಿಯಲ್ಲಿ ಕೊರೊನ ವೈರಸ್ ತೀವ್ರ ಪ್ರಮಾಣದಲ್ಲಿ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತ ಸೇರಿದಂತೆ ಹಲವು ದೇಶಗಳು ಚೀನಾದಿಂದ, ವಿಶೇಷವಾಗಿ ವುಹಾನ್‌ನಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ಎಚ್ಚರ ವಹಿಸಿ ವೈದ್ಯಕೀಯ ತಪಾಸಣೆ ಚುರುಕುಗೊಳಿಸಿದೆ. ಕೊರೊನ ವೈರಸ್ ತೀವ್ರ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ, ಭಾರತ ಸಹಿತ ಹಲವು ರಾಷ್ಟ್ರಗಳು ಪ್ರವಾಸಿಗರಿಗೆ ಸಲಹೆ ರವಾನಿಸಿದೆ. ಈ ವೈರಸ್ ಪ್ರಾಣಿಗಳ ಮೂಲಕ ಹರಡುವ ಸಾಧ್ಯತೆಯಿದೆ . ನಿಕಟ ಸಂಪರ್ಕವಿರುವ ಮನುಷ್ಯರ ಮಧ್ಯೆ ಇದು ಹರಡುವ ಸಾಧ್ಯತೆಯೂ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿಕೆ ನೀಡಿತ್ತು.

ಈ ವೈರಸ್‌ನ ಮೂಲ ಪ್ರಾಣಿಯ ಬಗ್ಗೆ ವಿಜ್ಞಾನಿಗಳು ಇನ್ನೂ ನಿರ್ಧರಿಸಿಲ್ಲ. ಆದರೆ ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಚೀನಾ ಸೋಮವಾರ ದೃಢಪಡಿಸಿದೆ. ಈ ಮಾರಣಾಂತಿಕ ವೈರಸ್ ಮಾನವರ ಮಧ್ಯೆ ಹರಡುವುದು ವುಹಾನ್‌ನ ಒಂದು ಪ್ರಕರಣದಲ್ಲಿ ದೃಢಪಟ್ಟಿದೆ. ಇಲ್ಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಕೊರೊನ ವೈರಸ್ ಬಾಧಿತ ಮಹಿಳೆಯೊಬ್ಬಳಿಂದ 14 ವೈದ್ಯಕೀಯ ಸಿಬಂದಿಗಳಿಗೆ ಸೋಂಕು ಹರಡಿದೆ ಎಂದು ಚೀನಾದ ಉಸಿರಾಟದ ಕಾಯಿಲೆಯ ಪ್ರಮುಖ ಪ್ರಯೋಗಾಲಯದ ನಿರ್ದೇಶಕ ರೆಂಗ್ ನನ್ಶಾನ್ ಹೇಳಿದ್ದಾರೆ. ದೇಶದಲ್ಲಿ ವರದಿಯಾಗಿರುವ ಕೊರೊನ ವೈರಸ್ ಪ್ರಕರಣದಲ್ಲಿ ಕನಿಷ್ಟ 95% ವುಹಾನ್‌ಗೆ ಸಂಬಂಧಿಸಿದ್ದಾಗಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ವುಹಾನ್‌ನಿಂದ ದಕ್ಷಿಣ ಕೊರಿಯಾದ ಸಿಯೋಲ್‌ಗೆ ವಿಮಾನದ ಮೂಲಕ ಪ್ರಯಾಣಿಸಿದ ಚೀನಾದ ಮಹಿಳೆಯೊಬ್ಬರು ಕೊರೊನ ವೈರಸ್ ಬಾಧಿತರಾಗಿ ಸಿಯೋಲ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನರ ಪ್ರಾಣ ಉಳಿಸಲು ಆದ್ಯತೆ: ಕ್ಸಿ ಜಿಂಪಿಂಗ್

ಈ ಮಧ್ಯೆ, ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನ ವೈರಸ್‌ನ ನಿಯಂತ್ರಣಕ್ಕೆ ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಹೇಳಿರುವುದಾಗಿ ಸರಕಾರದ ಟಿವಿ ವಾಹಿನಿ ತಿಳಿಸಿದೆ.

 ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಅಧ್ಯಕ್ಷರು ಕೊರೊನ ವೈರಸ್‌ನ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಜನರ ಪ್ರಾಣ ಮತ್ತು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಮತ್ತು ವೈರಸ್ ಹರಡದಂತೆ ನಿಗ್ರಹಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News