ರೋಹಿಂಗ್ಯನ್ನರ ವಿರುದ್ಧ ಭದ್ರತಾ ಪಡೆಯಿಂದ ಯುದ್ಧಾಪರಾಧ, ಗಂಭೀರ ಮಾನವಹಕ್ಕು ಉಲ್ಲಂಘನೆ

Update: 2020-01-21 15:01 GMT

ಯಾಂಗನ್, ಜ.21: ರೊಹಿಂಗ್ಯಾ ಮುಸ್ಲಿಮರ ಪ್ರತಿಭಟನೆಯನ್ನು ನಿಗ್ರಹಿಸುವ ಸಂದರ್ಭ ಭದ್ರತಾ ಪಡೆಗಳು ಯುದ್ಧಾಪರಾಧ ಎಸಗಿರುವ ಸಾಧ್ಯತೆಯಿದೆ ಎಂದು ಮ್ಯಾನ್ಮಾರ್ ಸರಕಾರ ನೇಮಿಸಿದ ಸ್ವತಂತ್ರ ತನಿಖಾ ಆಯೋಗ ವರದಿ ನೀಡಿದೆ.

ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ದಿಕ್ಕೆಟ್ಟ 7 ಲಕ್ಷಕ್ಕೂ ಹೆಚ್ಚಿನ ರೊಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ರೊಹಿಂಗ್ಯಾಗಳ ವಿರುದ್ಧ ಇಂತಹ ಗಂಭೀರ ಅಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ನಡೆದಿರುವುದಕ್ಕೆ ಹಲವರು ಹೊಣೆಯಾಗಿದ್ದಾರೆ. ಆದರೆ 2017ರಲ್ಲಿ ಯುದ್ಧಾಪರಾಧ, ಗಂಭೀರ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆ, ದೇಶೀಯ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಮ್ಯಾನ್ಮಾರ್ ಭದ್ರತಾ ಪಡೆಗಳ ಸದಸ್ಯರು ಶಾಮೀಲಾಗಿದ್ದಾರೆ ಎಂದು ನಂಬಲು ಹಲವು ಕಾರಣಗಳಿವೆ. ಅಮಾಯಕ ಗ್ರಾಮಸ್ಥರ ಹತ್ಯೆ, ಅವರ ಮನೆಗಳನ್ನು ಧ್ವಂಸ ಮಾಡಿರುವ ಘಟನೆಯಲ್ಲಿ ಮ್ಯಾನ್ಮಾರ್‌ನ ಭದ್ರತಾ ಪಡೆಗಳ ಪಾತ್ರವಿದೆ ಎಂದು ವರದಿ ತಿಳಿಸಿದೆ.

ಆದರೆ ರೊಹಿಂಗ್ಯಾಗಳ ವಿರುದ್ಧ ನಡೆದ ದೌರ್ಜನ್ಯ ಯೋಜಿತ ಜನಾಂಗ ಹತ್ಯೆಯಾಗಿದೆ ಎಂಬ ಆರೋಪಕ್ಕೆ ಸೂಕ್ತ ಪುರಾವೆ ದೊರಕಿಲ್ಲ ಎಂದು ಫಿಲಿಪ್ಪೀನ್ಸ್‌ನ ಹಿರಿಯ ರಾಜತಾಂತ್ರಿಕ ರೊಸಾರಿಯೊ ಮನಾಲೊ ನೇತೃತ್ವದ ತನಿಖಾ ಆಯೋಗದ ವರದಿ ತಿಳಿಸಿದೆ. ಅಲ್ಲದೆ ‘ಅರಾಕನ್ ರೊಹಿಂಗ್ಯಾ ಸಾಲ್ವೇಷನ್ ಆರ್ಮಿ’ಗೆ ಸೇರಿದ್ದ ರೊಹಿಂಗ್ಯಾ ಗೆರಿಲ್ಲಾ ಪಡೆ(ಅಡಗಿ ಕುಳಿತು ದಾಳಿ ನಡೆಸುವ ತಂಡ) ನಡೆಸಿದ್ದ ಮಾರಣಾಂತಿಕ ದಾಳಿಗಳಿಗೆ ಉತ್ತರವಾಗಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಇದಾಗಿತ್ತು ಎಂದು ವರದಿ ತಿಳಿಸಿದೆ.

461 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದು ಸರಕಾರ ವರದಿಯ ಅಂಶವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಸಮಿತಿ ತಿಳಿಸಿದೆ. ಜಪಾನ್‌ನ ನಿವೃತ್ತ ರಾಜತಾಂತ್ರಿಕ ಕೆಂಜೊ ಒಶಿಮ, ಮ್ಯಾನ್ಮಾರ್ ಅಧ್ಯಕ್ಷರ ಸಲಹೆಗಾರ ಆಂಗ್ ತುನ್ ತೇಟ್ ಮತ್ತು ಕಾನೂನು ತಜ್ಞ ಮ್ಯಾ ಥೆನಿನ್ ಸಮಿತಿಯ ಸದಸ್ಯರಾಗಿದ್ದಾರೆ. ಆಯೋಗದ ಫೇಸ್‌ಬುಕ್ ಪುಟದಲ್ಲಿ ನೀಡಿರುವ ಹೇಳಿಕೆಯಲ್ಲಿ ವರದಿಯ ಸಾರಾಂಶವನ್ನು ಪ್ರಕಟಿಸಲಾಗಿದ್ದು ಪೂರ್ಣ ವರದಿಯನ್ನು ಪ್ರಕಟಿಸಲಾಗಿಲ್ಲ.

ಈ ಮಧ್ಯೆ, ಸರಕಾರದ ನಿಕಟವರ್ತಿ ಒಳಗೊಂಡಿರುವ ಸಮಿತಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಸರಕಾರದ ನಿಕಟವರ್ತಿಯನ್ನು ಒಳಗೊಂಡಿರುವ, ಸರಕಾರದ ಕೃಪಾಪೋಷದಡಿ ಕಾರ್ಯನಿರ್ವಹಿಸಿದ ತನಿಖಾ ಸಮಿತಿಯಿಂದ ಪಾರದರ್ಶಕ ವರದಿ ನಿರೀಕ್ಷಿಸಲಾದೀತೇ? ವರದಿಯಲ್ಲಿ ಗಂಭೀರ ಪ್ರಮಾಣದಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಎಂದು ಉಲ್ಲೇಖಿಸಲಾಗಿದೆ, ಆದರೆ ಮಾನವೀಯತೆಯ ವಿರುದ್ಧದ ಅಪರಾಧದ ಕುರಿತು ಸೊಲ್ಲೆತ್ತಿಲ್ಲ. ರೊಹಿಂಗ್ಯಾಗಳ ವಿರುದ್ಧದ ಸಾಮೂಹಿಕ ದೌರ್ಜನ್ಯದಲ್ಲಿ ಶಾಮೀಲಾಗಿರುವ ಭದ್ರತಾ ಸಿಬ್ಬಂದಿಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯೂಯಾರ್ಕ್ ಮೂಲದ ಮಾನವಹಕ್ಕು ಹೋರಾಟ ಸಂಘಟನೆಯ ಏಶ್ಯಾ ವಿಭಾಗದ ಉಪನಿರ್ದೇಶಕ ಫಿಲ್ ರಾಬರ್ಟ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News