ಉಕ್ರೇನ್ ವಿಮಾನಕ್ಕೆ ಕ್ಷಿಪಣಿ ದಾಳಿ: ದೃಢೀಕರಿಸಿದ ಇರಾನ್

Update: 2020-01-21 15:08 GMT

ಟೆಹ್ರಾನ್, ಜ.21: ಈ ತಿಂಗಳ ಆರಂಭದಲ್ಲಿ ಪತನವಾದ ಉಕ್ರೇನ್‌ನ ಪ್ರಯಾಣಿಕ ವಿಮಾನದ ಮೇಲೆ ಎರಡು ಸಮೀಪ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಲಾಗಿತ್ತು ಎಂದು ಇರಾನ್‌ನ ವಿಮಾನಯಾನ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಉಕ್ರೇನ್‌ನ ವಿಮಾನದ ಮೇಲೆ ಎರಡು ಕ್ಷಿಪಣಿ ಹಾರಿಸಿರುವುದನ್ನು ಪ್ರಾಥಮಿಕ ವರದಿ ದೃಢಪಡಿಸಿದೆ. ಆದರೆ ವಿಮಾನ ಪತನಕ್ಕೂ ಕ್ಷಿಪಣಿ ದಾಳಿಗೂ ಸಂಬಂಧವಿದೆಯೇ ಎಂಬುದನ್ನು ಖಚಿತಪಡಿಸಲು ತನಿಖೆ ಮುಂದುವರಿದಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಜನವರಿ 8ರಂದು ಟೆಹ್ರಾನ್ ವಿಮಾನನಿಲ್ದಾಣದಿಂದ ಉಕ್ರೇನ್‌ನ ಕೀವ್‌ಗೆ ಹೊರಟಿದ್ದ ಉಕ್ರೇನ್‌ನ ವಿಮಾನ ಟೇಕ್‌ಆಫ್ ಆದ ಕೆಲ ಹೊತ್ತಿನಲ್ಲೇ ಪತನಗೊಂಡು ವಿಮಾನದಲ್ಲಿದ್ದ ಎಲ್ಲಾ 176 ಮಂದಿಯೂ ಮೃತಪಟ್ಟಿದ್ದರು. ಅಮೆರಿಕದ ವಿಮಾನವೆಂದು ತಪ್ಪಾಗಿ ಭಾವಿಸಿದ ಇರಾನ್ ಸೇನಾಪಡೆಯ ಕ್ಷಿಪಣಿ ದಾಳಿ ಈ ದುರಂತಕ್ಕೆ ಕಾರಣ ಎಂಬ ಆರೋಪವನ್ನು ಆರಂಭದಲ್ಲಿ ತಳ್ಳಿಹಾಕಿದ್ದ ಇರಾನ್, ಬಳಿಕ ಒಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News