ಆಂಧ್ರ ವಿಧಾನ ಪರಿಷತ್‌ನಲ್ಲಿ ಕೋಲಾಹಲ: ವಿಧಾನ ಪರಿಷತ್ ರದ್ದತಿಗೆ ಜಗನ್ ಸರಕಾರ ಚಿಂತನೆ

Update: 2020-01-21 16:53 GMT

ಅಮರಾವತಿ, ಜ. 21: ಮೂರು ರಾಜಧಾನಿ ನಿರ್ಮಿಸುವ ಮಸೂದೆ ಆಂಧ್ರಪ್ರದೇಶ ವಿಧಾನ ಪರಿಷತ್‌ನಲ್ಲಿ ಕೋಲಾಹಲ ಉಂಟು ಮಾಡಿದ ಹಿನ್ನೆಲೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ದ ಸರಕಾರ ವಿಧಾನ ಪರಿಷತ್ ಅನ್ನು ರದ್ದುಗೊಳಿಸುವ ಪ್ರಸ್ತಾವದ ಬಗ್ಗೆ ಚಿಂತನೆ ನಡೆಸುತ್ತಿದೆ.

ರಾಜ್ಯ ವಿಧಾನ ಸಭೆಯಲ್ಲಿ ಈ ಮಸೂದೆ ಸೋಮವಾರ ಅಂಗೀಕಾರವಾಗಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ವೈಎಸ್‌ಆರ್‌ಸಿಪಿಗೆ ಬಹುಮತ ಇಲ್ಲ. ಇಲ್ಲಿ ಮಸೂದೆಗೆ ಪ್ರಮುಖ ವಿಪಕ್ಷವಾದ ತೆಲುಗು ದೇಶಂ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಮುನ್ನ ನಿಯಮ 71ರ ಅಡಿಯಲ್ಲಿ ನೀಡುವ ನೋಟಿಸಿನ ಕುರಿತು ಚರ್ಚೆ ನಡೆಸಬೇಕು ಎಂದು ತೆಲುಗು ದೇಶಂ ಪಕ್ಷ ಸೂಚಿಸಿತ್ತು.

ಟಿಡಿಪಿಯ ಆಗ್ರಹವನ್ನು ಪರಿಷತ್ ಅಧ್ಯಕ್ಷ ಮುಹಮ್ಮದ್ ಅಹ್ಮದ್ ಶರೀಫ್ ಒಪ್ಪಿಕೊಂಡಿರುವುದಕ್ಕೆ ವೈಎಸ್‌ಆರ್‌ಸಿಪಿ ತೀವ್ರ ವಿರೋಧ ವ್ಯಕ್ತಪಡಿಸಿತು. ಇದು ತಪ್ಪು ಪೂರ್ವ ನಿರ್ದೇಶನವನ್ನು ಆರಂಭಿಸುತ್ತದೆ. ಆದುದರಿಂದ ಈ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಸಚಿವ ಬಿ. ರಾಜೇಂದ್ರನಾಥ್ ಆಗ್ರಹಿಸಿದರು. ನಿಯಮ 71ರ ಅಡಿಯಲ್ಲಿ ಟಿಡಿಪಿ ನೋಟಿಸಿನ ಕುರಿತು ಚರ್ಚೆಗೆ ಅವಕಾಶ ನೀಡುವ ಮುನ್ನ ಎರಡು ಮಸೂದೆ ಬಗ್ಗೆ ಚರ್ಚಿಸಲು ಅಧ್ಯಕ್ಷರು ಅವಕಾಶ ನೀಡುವಂತೆ ಅವರು ಆಗ್ರಹಿಸಿದರು.

ಇದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಈ ಕಾರಣಕ್ಕೆ ಅಧ್ಯಕ್ಷರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಸದನ ಮರು ಆರಂಭವಾಗುತ್ತಿದ್ದಂತೆ ಟಿಡಿಪಿ ಸದಸ್ಯ ವೈ ರಾಜೇಂದ್ರ ಪ್ರಸಾದ್ ಮಾತನಾಡುವಂತೆ ಅಧ್ಯಕ್ಷರು ಹೇಳಿದರು. ಇದಕ್ಕೆ ಆಡಳಿತಾರೂಢ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕೆಲವು ಸಚಿವರು ಅಧ್ಯಕ್ಷರ ವೇದಿಕೆಯತ್ತ ಧಾವಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಸದನವನ್ನು ಮತ್ತೊಮ್ಮೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News