×
Ad

ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ

Update: 2020-01-21 23:06 IST

ಹೊಸದಿಲ್ಲಿ,ಜ.21: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೈಗೆತ್ತಿಕೊಳ್ಳಲಿದೆ.

ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ಜ.18ರಂದು ಕೇಂದ್ರಕ್ಕೆ ನೋಟಿಸ್‌ನ್ನು ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿರುವ ಅರ್ಜಿಗಳು ಸೇರಿದಂತೆ 143 ಅರ್ಜಿಗಳ ವಿಚಾರಣೆ ನಡೆಸಲಿದೆ.

ನಂತರ ಸಲ್ಲಿಸಲಾಗಿರುವ ಕೆಲವು ಅರ್ಜಿಗಳು ಜ.10ರಿಂದ ಜಾರಿಗೊಂಡಿರುವ ಸಿಎಎ ಕಾರ್ಯಾಚರಣೆಯನ್ನು ತಡೆಯುವಂತೆಯೂ ಕೋರಿವೆ.

ಸಿಎಎ ಸಾಂವಿಧಾನಿಕ ಎಂದು ಘೋಷಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಂಗೀಕರಿಸಲು ಜ.9ರಂದು ನಿರಾಕರಿಸಿದ್ದ ಸರ್ವೋಚ್ಛ ನ್ಯಾಯಾಲಯವು,ದೇಶವು ಸಂಕಷ್ಟ ಸ್ಥಿತಿಯಲ್ಲಿದೆ ಮತ್ತು ಬಹಳಷ್ಟು ಹಿಂಸಾಚಾರ ನಡೆಯುತ್ತಿದೆ. ಶಾಂತಿಗಾಗಿ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿತ್ತು.

ಸಿಎಎ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಮತ್ತು ಧರ್ಮದ ಆಧಾರದಲ್ಲಿ ತಾರತಮ್ಯದ ಮೂಲಕ ಒಂದು ವರ್ಗದ ಅಕ್ರಮ ವಲಸಿಗರಿಗೆ ಪೌರತ್ವ ನೀಡಲು ಉದ್ದೇಶಿಸಿದೆ ಎಂದು ಐಯುಎಂಎಲ್ ತನ್ನ ಅರ್ಜಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News